ದುಬೈ:
ಕಿವಿಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಾರಮ್ಯದ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹೌದು.. ಐಸಿಸಿಯ ಕನಸಿನ ಕೂಸಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾದ ದಿನದಿಂದಲೂ ಭಾರತ ತಂಡ ಅಜೇಯವಾಗಿ ಅಗ್ರ ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊದಲ ಆಘಾತ ಎದುರಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ತಂಡಗಳ ಪಟ್ಟಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿತ್ತು.
ಇನ್ನು ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ ಸೋತಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿಯೇ ಮುಂದುವರೆದಿದೆ. ಒಟ್ಟು 8 ಪಂದ್ಯಗಳನ್ನಾಡಿರುವ ಭಾರತ 7 ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ಸೋತು ಒಟ್ಟು 360 ಅಂಕಗಳನ್ನು ತನ್ನ ಖಾತೆಯಲ್ಲಿರಿಸಿಕೊಂಡಿದೆ. 296 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ 2ನೇ ಸ್ಥಾನದಲ್ಲಿದ್ದು, 146 ಅಂಕಗಳೊಂದಿಗೆ ಇಂಗ್ಲೆಂಡ್ ತಂಡ 4ನೇ ಸ್ಥಾನದಲ್ಲಿದೆ.