ಕೊಲಂಬೋ:
ಮಾಜಿ ಕ್ರಿಕೆಟಿಗ ಶ್ರೀ ಮುತ್ತಯ್ಯ ಮುರಳೀಧರನ್ ಅವರು ಶ್ರೀಲಂಕಾ ಉತ್ತರ ಪ್ರಾಂತ್ಯದ ಗವರ್ನರ್ ಆಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ ಈ ಹುದ್ದೆ ಸ್ವೀಕರಿಸುವಂತೆ ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರು ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಮುರಳೀಧರನ್ ಅವರು ಗವರ್ನರ್ ಆಗುವುದಕ್ಕೆ ಸ್ಥಳೀಯ ತಮಿಳರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ತಮಿಳರ ವಿರೋಧದ ನಡುವೆಯೂ ಮುತ್ತಯ್ಯಗೆ ಮಹತ್ವದ ಹುದ್ದೆಯನ್ನು ಗೋಟಾಬಯ ಅವರು ನೀಡಲು ಮುಂದಾಗಿರುವುದು ಗಮನಾರ್ಹ. ಮಹಿಂದಾ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷರಾಗಿದ್ದಾಗ, ಹಾಗೂ ಗೋಟಾಬಯ ರಾಜಪಕ್ಸ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆದ ಆರೋಪಗಳಿವೆ. 2005ರಿಂದ 2015ರ ಈ ಅವಧಿಯಲ್ಲಿ ತಮಿಳಿರ ಆತ್ಮರಕ್ಷಣಾ ಹೋರಾಟವನ್ನು ರಾಜಪಕ್ಸ ಕುಟುಂಬ ಹತ್ತಿಕ್ಕಿದೆ ಎನ್ನಲಾಗಿದೆ.
ಆದರೆ, ಮುತ್ತಯ್ಯ ಮುರಳೀಧರನ್ ಅವರು ಲಂಕಾ ತಮಿಳರ ಮೇಲೆ ಯಾವುದೇ ರೀತಿಯ ಅನ್ಯಾಯವೇ ಆಗಿಲ್ಲ ಎಂದು ಹೇಳಿಕೆ ನೀಡಿವ ಮೂಲಕ ತಮಿಳರ ಆಕ್ರೋಶಕ್ಕೆ ಗುರಿಯಾಗಿದ್ದರು. ಕೆಲ ದಿನಗಳ ಹಿಂದೆ ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಾಬಯ ರಾಜಪಕ್ಸ ಅವರು ಶೇ. 52.25ರಷ್ಟು ಮತ ಪಡೆದು ಭರ್ಜರಿ ಗೆಲುವು ಪಡೆದರು. ಪ್ರಮುಖ ಎದುರಾಳಿ ಸಜಿತ್ ಪ್ರೇಮದಾಸ ಶೇ. 41.99 ಮತ ಪಡೆದು ಎರಡನೇ ಸ್ಥಾನ ಪಡೆದರು. ಮೂರನೇ ಸ್ಥಾನ ಪಡೆದ ಅನುರಾ ಕುಮಾರ ಡಿಸ್ಸನಾಯಕ ಪಡೆದ ಮತ ಪ್ರಮಾಣ ಕೇವಲ ಶೇ. 3.16 ಮಾತ್ರ. ಇನ್ನುಳಿದ 33 ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಕೂಡ ಒಂದು ಪ್ರತಿಶತದಷ್ಟು ಮತ ಕೂಡ ಪಡೆಯಲಿಲ್ಲ ಎಂದು ತಿಳಿದು ಬಂದಿದೆ.