ಜಿನಿವಾ:
ವಿಶ್ವದೆಲ್ಲಡೆ ತನ್ನ ಆರ್ಭಟ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಚೀನಾ ಬೆನ್ನಿಗೆ ನಿಂತಿದ್ದು, ವೈರಸ್ ಮೂಲ ಹುಡುಕು ಕಾರ್ಯದಲ್ಲಿ ಚೀನಾ ಉತ್ತಮ ಸಹಕಾರ ನೀಡುತ್ತಿದೆ ಎಂದು ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಡಾ. ಮೈಕೆಲ್ ರಯಾನ್ ಅವರು ಮಾತನಾಡಿದ್ದು, ‘ಕೊರೋನಾ ವೈರಸ್ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಚೀನಾ ಜೊತೆ ನಾವು ಪ್ರತಿದಿನ ಚರ್ಚೆ ನಡೆಸುತ್ತಿದ್ದೇವೆ. ಪ್ರಾಣಿಗಳ ಮೂಲದಿಂದ ಇದು ಹರಡಿರಬಹುದೇ ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಚೀನಾ ನಮಗೆ ಉತ್ತಮ ಸಹಕಾರ ನೀಡುತ್ತಿದೆ. ವೈರಸ್ ನ ಮೂಲವನ್ನು ಪತ್ತೆ ಸಂಬಂಧ ಅಂತರಾಷ್ಟ್ರೀಯ ಪ್ರತಿನಿಧಿಗಳ ತಂಡವನ್ನು ಚೀನಾಗೆ ಕಳುಹಿಸಲು ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರವೇ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








