ಇಸ್ಲಾಮಾಬಾದ್
ಇಡೀ ವಿಶ್ವದ ನಿದ್ದೆ ಕೆಡಿಸಿ ತಾನು ಮಾತ್ರ ಹಾಯಾಗಿ ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ಅಡಗಿರುವ ಹಫೀಜ್ ಸೈಯದ್ ಗೆ ಪಾಕ್ ಸರ್ಕಾರ ದೊಡ್ಡ ಶಾಕ್ ನೀಡಿದೆ.
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೊಹಮ್ಮದ್ ಹಫೀಜ್ ಸಯೀದ್ ಮುನ್ನಡೆಸುತ್ತಿರುವ ಎರಡು ಸಂಘಟನೆಗಳಿಗೆ ನಿನ್ನೆ ಪಾಕಿಸ್ತಾನ ಸರ್ಕಾರ ದಿಢೀರ್ ನಿಷೇಧ ಹೇರಿ ಆದೇಶ ಹೊರಡಿಸಿದೆ. ಸಿಆರ್‌ಪಿಎಫ್‌ನ 40 ಯೋಧರನ್ನು ದಾಳಿ ಪಡೆದ ಪುಲ್ವಾಮಾ ದಾಳಿ ಬಳಿಕ ಜಾಗತಿಕವಾಗಿ ಒತ್ತಡ ಎದುರಿಸುತ್ತಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಸಮುದಾಯದ ಓಲೈಕೆಗಾಗಿ ಈ ಕಣ್ಣೊರೆಸುವ ತಂತ್ರದ ಮೊರೆ ಹೋಗಿದೆ ಎಂದು ತಜ್ಞರು ವ್ಯಾಖ್ಯಾನಿಸಿದ್ದಾರೆ
ನಿನ್ನೆ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಹಫೀಜ್ ಸಯೀದ್‌ನ ಜಮಾತ್ ಉದ್ ದಾವಾ ಹಾಗೂ ದತ್ತಿ ಸಂಸ್ಥೆ ಫಾಲಾ ಎ ಇನ್ಸಾನಿಯಾತ್ ಸಂಘಟನೆಗಳಿಗೆ ನಿಷೇಧ ಹೇರುವ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಗೃಹ ಇಲಾಖೆಯ ನಿಗಾ ಪಟ್ಟಿಯಲ್ಲಿದ್ದ ಈ ಎರಡೂ ಸಂಘಟನೆಗಳಿಗೆ ಈಗ ನಿಷೇಧ ಹೇರಲು ತೀರ್ಮಾನಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಇಲಾಖೆ ತಿಳಿಸಿದೆ.
ಜಮಾತ್ ಉದ್ ದಾವಾ ಸಂಘಟನೆ 300 ಸೆಮಿನರಿಗಳು ಹಾಗೂ ಶಾಲೆಗಳು, ಆಸ್ಪತ್ರೆಗಳು, ಒಂದು ಪ್ರಕಾಶನ ಸಂಸ್ಥೆ ಮತ್ತು ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ನಿಷೇಧಕ್ಕೆ ಒಳಗಾದ ಎರಡೂ ಸಂಘಟನೆಗಳಲ್ಲಿ ಸುಮಾರು 50 ಸಾವಿರ ಸ್ವಯಂಸೇವಕರು ಹಾಗೂ ವೇತನ ಪಡೆಯುವ ನೌಕರರು ಇದ್ದಾರೆ.
ವಿಶೇಷ ಎಂದರೆ, ಪುಲ್ವಾಮಾ ದಾಳಿ ನಡೆಸಿದ್ದು ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಷ್ ಎ ಮೊಹಮ್ಮದ್ ಸಂಘಟನೆಯಾಗಿದ್ದರೂ, ಪಾಕಿಸ್ತಾನ ಜಮಾತ್ ಉದ್ ದಾವಾ ವಿರುದ್ಧ ಕ್ರಮ ಕೈಗೊಂಡಿರುವುದು ಕಣ್ಣೊರೆಸುವ ತಂತ್ರವಷ್ಟೇ ಎಂದು ಭದ್ರತಾ ತಜ್ಞರು ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
