ಬೆಂಗಳೂರು
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಪ್ರಾರಂಭವಾಗಿ 13 ವರ್ಷಗಳು ಕಳೆದಿವೆ. ನಿತ್ಯ ಸಾವಿರಾರು ಮಂದಿ ಮೆಟ್ರೋ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಹೀಗೆ ರಾಜಧಾನಿಯ ಹತ್ತಾರು ಕಡೆ ಪ್ರಯಾಣಿಕರನ್ನು ಹೊತ್ತೊಯ್ಯುವ ಮೆಟ್ರೋದ ನಿಲ್ದಾಣಗಳು ಆತ್ಮಹತ್ಯೆ ತಾಣಗಳಾಗಿ ಬದಲಾಗುತ್ತಿರುವ ಅನುಮಾನ ಶುರುವಾಗಿದೆ. ಕಳೆದ 9 ತಿಂಗಳಲ್ಲಿ 7 ಅವಾಂತರಗಳು ನಡೆದಿದ್ದು, ಮೆಟ್ರೋ ಹಳಿಗೆ ಜಿಗಿದು ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಟ್ರಾಫಿಕ್ನಿಂದ ಬಚಾವ್ ಆಗಬೇಕೆಂದು ಮೆಟ್ರೋ ಏರುವ ಪ್ರಯಾಣಿಕರು, ಸಂಚಾರ ವ್ಯತ್ಯಯಕ್ಕೆ ಹೈರಾಣಾಗುತ್ತಿದ್ದಾರೆ.
ಪದೇ ಪದೇ ಅವಾಂತರಗಳು ನಡೆಯುತ್ತಿವೆ. ಆದರೆ, ಮೆಟ್ರೋ ಅಧಿಕಾರಿಗಳು ಮಾತ್ರ ಶಾಶ್ವತ ಪರಿಹಾರಕ್ಕೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಪ್ರಯಾಣಿಕರು ಟ್ರ್ಯಾಕ್ಗೆ ಹಳಿಗೆ ಇಳಿಯದಂತೆ ಅಥವಾ ಜಿಗಿಯದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಳ್ಳಬೇಕು. ಇದಕ್ಕಿರುವ ಏಕೈಕ ಮಾರ್ಗ ಅಂದರೆ ಅದು ಪಿಎಸ್ಡಿ (ಫ್ಲಾಟ್ ಫಾರಂ ಸ್ಕ್ರೀನಿಂಗ್ ಡೋರ್). ಇದು ಮೆಟ್ರೋ ನಿಲ್ದಾಣಕ್ಕೆ ಬಂದಾಗ ಮಾತ್ರ ಬಾಗಿಲು ತೆರೆದುಕೊಳ್ಳುವಂತೆ ಮಾಡುತ್ತದೆ. ಇದರ ಮೂಲಕ ಅವಾಂತರಗಳನ್ನ ತಪ್ಪಿಸಬಹುದು.
ಇನ್ನು ಪಿಎಸ್ಡಿ ಅಳವಡಿಸುವುದು ಭಾರತಕ್ಕೆ ಹೊಸ ವಿಷಯವೇನಲ್ಲ. ಈಗಾಗಲೇ ದೆಹಲಿ, ಚೆನ್ನೈ ಹಾಗೂ ಕೊಚ್ಚಿ ಮೆಟ್ರೋ ನಿಲ್ದಾಣಗಳಲ್ಲಿ ಈ ಡೋರ್ನ ವ್ಯವಸ್ಥೆ ಇದೆ. ಆದರೆ, ನಮ್ಮ ಮೆಟ್ರೋ ಶುರುವಾಗಿ 13 ವರ್ಷ ಕಳೆದರೂ ಪ್ರಯಾಣಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ .ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಕೆಲ ತಿಂಗಳುಗಳಿಂದ ಆಗುತ್ತಿರುವ ಅವಾಂತರಗಳನ್ನ ನೋಡಿದರೆ, ಪಿಎಸ್ಡಿ ಡೋರ್ ಅತ್ಯಂತ ಅಗತ್ಯವಾಗಿದೆ.