ಮಗಳ ಕೃತ್ಯ ನಂಬೋಕಾಗ್ತಿಲ್ಲ: ಉಗ್ರ ಡಾಕ್ಟರ್‌ ಶಾಹೀನ್‌ ತಂದೆ

ನವದೆಹಲಿ

     ದಿಲ್ಲಿ ಕಾರು ಸ್ಫೋಟ  ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ ಶಯೀದ್‌  ಆರೆಸ್ಟ್‌ ಆಗಿದ್ದಾಳೆ. ಈಕೆಯ ಸಹೋದರ ಪರ್ವೇಜ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಮಗಳ ಕೃತ್ಯದ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಆಕೆಯ ತಂದೆ ಸೈಯದ್‌ ಅಹ್ಮದ್‌ ಅನ್ಸಾರಿ ಪ್ರತಿಕ್ರಿಯಿಸಿದ್ದು, ಇದನ್ನು ನಂಬೋಕಾಗ್ತಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

    ನನಗೆ 3 ಮಕ್ಕಳು. ಶಾಹೀನ್, ಪರ್ವೇಜ್ ಇಬ್ಬರೂ ನನ್ನ ಮಕ್ಕಳೇ. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದೇನೆ. ಎರಡನೇಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಒಂದು ತಿಂಗಳಿನಿಂದ ಶಾಹೀನ್ ಜೊತೆ ನಾನು ಮಾತನಾಡಿಲ್ಲ. ಪರ್ವೇಜ್ ಜೊತೆ ವಾರಕ್ಕೊಮ್ಮೆ ಮಾತಾಡ್ತೀನಿ. ನಾನು ಕೊನೆಯ ಬಾರಿಗೆ ಶಾಹೀನ್ ಜೊತೆ ಮಾತನಾಡಿದ್ದು ಸುಮಾರು ಒಂದು ತಿಂಗಳ ಹಿಂದೆ. ಆದರೆ, ಪರ್ವೇಜ್ ಜೊತೆ ಪ್ರತಿ ವಾರ ಮಾತನಾಡುತ್ತೇನೆ. ಶಾಹೀನ್ ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ. ಹಿಂದಿನ ಮಂಗಳವಾರ ಪರ್ವೇಜ್‌ ಜೊತೆ ಮಾತನಾಡಿದ್ದೆ. ಅವನ ಯೋಗಕ್ಷೇಮವನ್ನು ಹೊರತುಪಡಿಸಿ ನಾವು ಬೇರೇನನ್ನೂ ಚರ್ಚಿಸಲಿಲ್ಲ ಎಂದು ತಿಳಿಸಿದ್ದಾರೆ. ‌ಇಂದು ಬೆಳಗ್ಗೆ ಪೊಲೀಸರು ಪರ್ವೇಜ್ ಮನೆ ಮೇಲೆ‌ ದಾಳಿ ಮಾಡಿದ್ದು ಗೊತ್ತಿದೆ ಎಂದು ಸೈಯದ್ ಅಹ್ಮದ್ ಅನ್ಸಾರಿ ತಿಳಿಸಿದ್ದಾರೆ.

    ಶಾಹೀನ್ ತನಿಖೆ ಬಳಿಕ ಪರ್ವೇಜ್ ಮನೆಗೆ ತನಿಖಾ ತಂಡ ದಾಳಿ ಮಾಡಿತ್ತು. ಶಾಹೀನ್ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದಾಳೆ. ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ 2,900 ಕೆಜಿ ಸ್ಫೋಟಕಗಳು ಮತ್ತು ದಹನಕಾರಿ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಬಂಧಿಸಲ್ಪಟ್ಟ ಕಾಶ್ಮೀರಿ ವೈದ್ಯ ಡಾ. ಮುಜಮ್ಮಿಲ್ ಜೊತೆ ಕೂಡ ನಿಕಟ ಸಂಪರ್ಕ ಹೊಂದಿದ್ದಾಳೆಂದು ವರದಿಯಾಗಿದೆ. 

    ಮುಜಮ್ಮಿಲ್ ಅವರ ಮಾಹಿತಿಯ ಆಧಾರದ ಮೇಲೆ, ಫರಿದಾಬಾದ್ ಪೊಲೀಸರು ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ವೈದ್ಯರಿಗೆ ಸೇರಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನದಿಂದ ಕಲಾಶ್ನಿಕೋವ್ ಅಸಾಲ್ಟ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಖನೌದಲ್ಲಿರುವ ಪರ್ವೇಜ್ ನಿವಾಸದಲ್ಲಿ ಉತ್ತರ ಪ್ರದೇಶ ಎಟಿಎಸ್, ಜಮ್ಮು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದಾರೆ. ಬರೋಬ್ಬರಿ 5 ಗಂಟೆಗಳ ಕಾಲ ಪರ್ವೇಜ್ ವಿಚಾರಣೆ ನಡೆಸಿದ್ದಾರೆ. ಪರ್ವೇಜ್ ನಿವಾಸದಲ್ಲೇ ವಿಚಾರಣೆ ನಡಸಲಾಗಿತ್ತು. ವಿಚಾರಣೆ ಬಳಿಕ ಪರ್ವೇಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

   ವೈದ್ಯರ ಸೋಗಿನಲ್ಲಿ ಬೆಳಗ್ಗೆ ಜನರಿಗೆ ಸೇವೆ ನೀಡುತ್ತಾ ಪ್ರಾಣ ಉಳಿಸುತ್ತಿದ್ದ ಶಂಕಿತ ಉಗ್ರರು, ರಾತ್ರಿ ಪ್ರಾಣ ತೆಗೆಯುವ ಕೆಲಸ ಮಾಡುತ್ತಿದ್ದರು ಅನ್ನೋದು ಫರೀದಾಬಾದ್ ಸ್ಫೋಟ ಪತ್ತೆ ಪ್ರಕರಣದಲ್ಲಿ ಬಯಲಾಗಿದೆ. ಫರೀದಾಬಾದ್ ಪ್ರಕರಣವನ್ನು ಪೊಲೀಸರು ಬಯಲು ಮಾಡಿ ಬರೋಬ್ಬರಿ 2900 ಕೆಜಿ ಸ್ಫೋಟಕ ವಶಪಡಿಸಿಕೊಂಡ ಬೆನ್ನಲ್ಲೇ ಉಗ್ರರು ಬೆಚ್ಚಿ ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಎಚ್ಚರ ವಹಿಸಿ ಮಾಡುತ್ತಿದ್ದ ಕಾರ್ಯಾಚರಣೆ ಬಯಲಾಗಿತ್ತು. ಹೀಗಾಗಿ ಸ್ಫೋಟಕವನ್ನು ಸ್ಥಳಾಂತರಿಸಲು ಅಥವಾ ವಿಲೇವಾರಿ ಮಾಡಲು ಪ್ರಯತ್ನಿಸುವಾಗ ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡಿದೆ ಎಂದು ಐ ಬಿ ಮೂಲಗಳ ಮಾಹಿತಿ ನೀಡಿದೆ. 

   ದೊಡ್ಡ ಮಟ್ಟದಲ್ಲಿ ಅವಘಡ ಸೃಷ್ಟಿಸುವ ಯೋಜನೆಯನ್ನು ಉಗ್ರರು ಹಾಕಿಕೊಂಡಿದ್ದರು. ಶಂಕಿತನ ಐಇಡಿ ಸಂಪರ್ಕ ಅಪೂರ್ಣವಾಗಿತ್ತು ಮತ್ತು ಸರಿಯಾಗಿ ಜೋಡಿಸಲಾಗಿರಲಿಲ್ಲ. ಹಾಗಾಗಿ ಪರಿಣಾಮ ಸೀಮಿತವಾಗಿತ್ತು. ಸರಿಯಾಗಿ ಜೋಡಿಸಿದ್ದರೆ ಪರಿಣಾಮ ಇನ್ನಷ್ಟು ಗಂಭೀರವಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಫೋಟದ ಸಮಯದಲ್ಲಿ ವಾಹನವು ಚಾಲನೆಯಲ್ಲಿ ಇದ್ದದ್ದೇ, ಆಕಸ್ಮಿಕ ಸ್ಫೋಟ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ ಎಂದಿದ್ದಾರೆ.

   ಐಇಡಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಪೋಟಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವಘಡ ಹಾಗೂ ಅಪಾಯದ ಪ್ರಮಾಣ ಕಡಿಮೆ ಆಗಿದೆ. ಒಂದು ಪ್ರಮುಖ ಮತ್ತು ದೊಡ್ಡ ದಾಳಿಯನ್ನು ತಪ್ಪಿಸಲಾಗಿದೆ. ಶಂಕಿತ ಮಾಡ್ಯೂಲ್‌ಗಳ ನೋಡಿದರೆ ಬಹುದೊಡ್ಡ ಅಪಾಯ ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link