2 ವಿಕೆಟ್‌ ಕಿತ್ತು ಕುಂಬ್ಳೆ, ಅಶ್ವಿನ್‌ ಜತೆ ಎಲೈಟ್‌ ಪಟ್ಟಿ ಸೇರಿದ ಜಡೇಜಾ

ಗುವಾಹಟಿ

    ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್  ಪಂದ್ಯದಲ್ಲಿ ಭಾರತ ಪರ ರವೀಂದ್ರ ಜಡೇಜಾ ಮಂಗಳವಾರ ನಾಲ್ಕನೇ ದಿನದ ಆಟದ ಬೆಳಗಿನ ಅವಧಿಯಲ್ಲಿ ಎರಡು ವಿಕೆಟ್‌ಗಳನ್ನು ಕೀಳುವ ಮೂಲಕ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಎಲೈಟ್‌ ಪಟ್ಟಿ ಸೇರಿದ್ದಾರೆ.

    ಜಡೇಜಾ ಎರಡು ವಿಕೆಟ್‌ ಪಡೆಯುತ್ತಿದ್ದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ 50 ವಿಕೆಟ್‌ ಪೂರ್ತಗೊಳಿಸಿದರು. ಈ ಮೂಲಕ ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್ ಮತ್ತು ಅಶ್ವಿನ್ ನಂತರ ಟೆಸ್ಟ್‌ನಲ್ಲಿ ಕನಿಷ್ಠ 50 ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಐದನೇ ಭಾರತೀಯ ಬೌಲರ್ ಎನಿಸಿದರು.

    ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕುಂಬ್ಳೆ ಹೆಸರಿನಲ್ಲಿದೆ. ತಮ್ಮ 18 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ, ಕುಂಬ್ಳೆ ದಕ್ಷಿಣ ಆಫ್ರಿಕಾ ವಿರುದ್ಧ 21 ಟೆಸ್ಟ್ ಪಂದ್ಯಗಳನ್ನು ಆಡಿ 84 ವಿಕೆಟ್‌ಗಳನ್ನು ಕೆಡವಿದ್ದಾರೆ. 64 ವಿಕೆಟ್‌ ಪಡೆದಿರುವ ಜಾವಗಲ್ ಶ್ರೀನಾಥ್ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಭಜನ್‌ ಸಿಂಗ್‌(60) ಮೂರನೇ ಸ್ಥಾನದಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆದಿರುವ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಜಡೇಜಾ 17 ಇನ್ನಿಂಗ್ಸ್‌ಗಳಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ. ನಡೆಯುತ್ತಿರುವ ಪಂದ್ಯದಲ್ಲಿ ಕನಿಷ್ಠ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಜಡೇಜಾ ಯಶಸ್ವಿಯಾದರೆ, ಅವರು ಅಶ್ವಿನ್ ಅವರನ್ನು ಹಿಂದಿಕ್ಕಿ ತವರಿನಲ್ಲಿ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.

Recent Articles

spot_img

Related Stories

Share via
Copy link