ಮಧುಗಿರಿ : ಪತ್ನಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

 ಮಧುಗಿರಿ : 

      ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

      ಮಿಡಿಗೇಶಿ ಹೋಬಳಿಯ ತಿಪ್ಪಾಪುರ ಗ್ರಾಮದ ನರಸಿಂಹಮೂರ್ತಿ(40) ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. ಈತನು 2018 ಜುಲೈ 17 ರಂದು ಸಂಜೆ ತನ್ನ ಪತ್ನಿ ಸರಸ್ವತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕೆಯೊಂದಿಗೆ ಜಗಳ ತೆಗೆದು, ಮನೆಯ ಕಬ್ಬಿಣದ ಬಾಗಿಲಿಗೆ ತಲೆಯನ್ನು ಕುಟ್ಟಿ, ಹಾಲ್‍ಗೆ ಎಳೆದುಕೊಂಡು ಹೋಗಿ ನೆಲದ ಮೇಲೆ ಕೆಡವಿ, ಚಪ್ಪಲಿ ಕಾಲಿನಿಂದ ಕುತ್ತಿಗೆಯನ್ನು ತುಳಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದನು. ನಂತರ ಮೃತಳು ಸೀರೆಯಿಂದ ನೇಣು ಹಾಕಿಕೊಂಡಿರುವಂತೆ ಮಾಡಿ ಸಾಕ್ಷ್ಯಾಧಾರಗಳನ್ನು ನಾಶ ಪಡಿಸಲು ಯತ್ನಿಸಿದ್ದನು.

      ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ ರವರು ಆರೋಪಿ ನರಸಿಂಹಮೂರ್ತಿಗೆ ಮಾ. 18 ರಂದು ಜೀವಾವಧಿ ಶಿಕ್ಷೆ ಮತ್ತು 60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಮೃತಳ ಸಹೋದರ ಗಂಗರಾಜು ರವರಿಗೆ 25 ಸಾವಿರ ರೂ.ಗಳ ಪರಿಹಾರ ನೀಡಲು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಅಂದಿನ ಸಿಪಿಐ ಅಂಬರೀಶ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾಗಿ ನಿರಂಜನ ಮೂರ್ತಿ ಬಾಲವಾಡಿಮಠ್ ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ