ನೀರಿನ ಆಯವ್ಯಯ ಸಿದ್ಧಪಡಿಸುವುದು ಅತ್ಯವಶ್ಯಕ : ಸಿಇಓ

ತುಮಕೂರು

    ನಿರಂತರ ಬರಗಾಲವನ್ನು ಎದುರಿಸುತ್ತಾ ಶೇ. 70 ರಷ್ಟು ಬರಪೀಡಿತವೆಂದು ಘೋಷಿಸಲ್ಪಡುತ್ತಿರುವ ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಹಂತದಲ್ಲಿಯೇ ಜಲಾಮೃತ ಯೋಜನೆಯಡಿ ನೀರಿನ ಆಯವ್ಯಯವನ್ನು ಸಿದ್ಧಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು.

    ಜಿಲ್ಲಾಪಂಚಾಯತ್ ಸಭಾಂಗಣದಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ತುಮಕೂರು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ‘ಗ್ರಾಮ ಪಂಚಾಯ್ತಿ ಹಂತದಲ್ಲಿ ನೀರಿನ ಆಯವ್ಯಯ ಸಿದ್ಧಪಡಿಸುವಿಕೆ ಮತ್ತು ಬದಲಾಗುವ ಹವಾಮಾನಕ್ಕೆ ಹೊಂದಿಕೊಳ್ಳುವಿಕೆ’ಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ತುಮಕೂರು ಜಿಲ್ಲೆಯಲ್ಲಿ ಬರ ಎನ್ನುವುದು ಸಾಮಾನ್ಯ ಸಂಗತಿಯಾಗಿದೆ. ಈ ವರ್ಷವೂ ಕೂಡ ಜಿಲ್ಲೆಯ 7 ತಾಲ್ಲೂಕುಗಳು ಬರಪೀಡಿತವೆಂದು ಘೋಷಿತವಾಗಿವೆ. ಅದಕ್ಕಾಗಿ ಜಿಲ್ಲೆಯಲ್ಲಿ ಹಣಕಾಸು ಆಯವ್ಯಯದಂತೆ ನೀರಿನ ಆಯವ್ಯಯ ಸಿದ್ಧಪಡಿಸುವುದು ಅಗತ್ಯವಾಗಿದೆ. ನೀರು ಮೂಲಭೂತ ಅಗತ್ಯಗಳಲ್ಲಿ ಪ್ರಮುಖವಾದುದು. ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಪ್ರತಿಯೊಂದಕ್ಕೂ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಯೋಜನೆ ರೂಪಿಸಿ ನೀರಿನ ರಕ್ಷಣೆಯಾಗಬೇಕು ಎಂದರು.

    ಜಿಲ್ಲೆಯಲ್ಲಿ ಜಲಾನಯನ ಅಭಿವೃದ್ಧಿಗೆ ಹಲವು ಯೋಜನೆಗಳು ಜಾರಿಯಲ್ಲಿವೆ. ಜಲಾಮೃತ ಯೋಜನೆಯಡಿ 15 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಆಸಕ್ತಿಯಿಂದ ವಾಟರ್ ಸೆಕ್ಯೂರಿಟಿ ಪ್ಲಾನ್, ಕನ್ಸರೆವೇಶನ್ ಅಂಡ್ ಬಜೆಟಿಂಗ್ ಆಗಬೇಕು.

     ಜಿಲ್ಲೆಯಲ್ಲಿ ಅನುಷ್ಠಾನವಾಗಿರುವ ಹಲವು ಯೋಜನೆಗಳಲ್ಲಿರುವ ಇತಿಮಿತಿಗಳ ಬಗ್ಗೆ ಚರ್ಚಿಸಿ ಜಲಾಮೃತ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಹಾಗೂ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಕಾರದಲ್ಲಿ ನೀರಿನ ಆಯವ್ಯಯ ಸಿದ್ಧವಾಗಿ ಜಿಲ್ಲೆಗೆ ಅನುಕೂಲವಾಗಬೇಕು. ಕಾರ್ಯಾಗಾರದಲ್ಲಿ ಗ್ರಾಮಪಂಚಾಯ್ತಿ ಪಿಡಿಒಗಳು ಆಸಕ್ತಿಯಿಂದ ಭಾಗವಹಿಸಿ ಪ್ರಯೋಜನ ಪಡೆದು, ನೀರಿನ ಆಯವ್ಯಯ ಸಿದ್ಧಪಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ತೊಡಗಿಸಿಕೊಂಡು ಜಲಾಮೃತ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು. ಬುದ್ದಿಜೀವಿಯಾದ ಮನುಷ್ಯನು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.

    ತುಮಕೂರು ಜಿಲ್ಲೆಯಲ್ಲಿ ಜಲಾಮೃತ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಜಲಾಮೃತ ಯೋಜನೆಯ ನಿರ್ದೇಶಕ ಬಿ. ನಿಜಲಿಂಗಪ್ಪ ಮಾತನಾಡಿ, ನೀರಿನ ಆಯವ್ಯಯ ಸಿದ್ಧಪಡಿಸಲು ಗ್ರಾಮ ಪಂಚಾಯ್ತಿ ಹಾಗೂ ಹೋಬಳಿ ಮಟ್ಟದಲ್ಲಿ ಪೋರ್ಟಲ್ ಹಾಗೂ ಕ್ಷೇತ್ರ ಭೇಟಿ ಮಾಡಿ ನೀರಿನ ಲಭ್ಯತೆಯ ಪ್ರಮಾಣ ಹಾಗೂ ನೀರಿನ ಬೇಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಇದರ ಆಧಾರದ ಮೇಲೆ ಮಳೆ ನೀರು ಕೊಯ್ಲು, ಮಣ್ಣಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಮಾರ್ಗೋಪಾಯಗಳ ಮೂಲಕ ವಾಟರ್ ಸೆಕ್ಯೂರಿಟಿ ಪ್ಲಾನ್ ಮಾಡಲಾಗುವುದು. ಅಟಲ್ ಭೂಜಲ್, ಜಲಾಮೃತ ಹಾಗೂ ಎಂಜಿ ನರೇಗಾ ಯೋಜನೆಗಳು ಸೇರಿದರೆ ನೀರಿನ ಆಯವ್ಯಯ ಸಿದ್ಧಪಡಿಸಲು ಅನುವಾಗುತ್ತದೆ ಎಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

    ಅಟಲ್ ಭೂಜಲ ಯೋಜನೆಯ(ಅಂತರ್ಜಲ) ನಿರ್ದೇಶಕ ಕಾಂತರಾಜ್ ಮಾತನಾಡಿ, ಜಿಲ್ಲೆಯ ನೀರಿನ ಮೂಲ ಮಳೆಯಾಗಿದೆ. ಮಳೆನೀರನ್ನು ಪರಿಣಾಮಕಾರಿ ಹಿಡಿದಿಟ್ಟುಕೊಂಡು ಬಳಸಬೇಕು. ಬಿದ್ದ ಮಳೆನೀರನ್ನು ಪಕ್ಕದ ಜಮೀನಿಗೂ ಕೂಡ ಬಿಡದೇ ಹಿಡಿದಿಟ್ಟುಕೊಳ್ಳಬೇಕು. ನೀರನ್ನು ಮೇಲ್ಮೈಯಲ್ಲಿ ಉಳಿತಾಯ ಮಾಡಿದರೆ ಅದು ದಿನಕಳೆದಂತೆ ಕಡಿಮೆಯಾಗುತ್ತದೆ ಆದರೆ ಅಂತರ್ಜಲದಲ್ಲಿ ಉಳಿತಾಯ ಮಾಡಿದರೆ ಸಮಸ್ಯೆಯಾಗುವುದಿಲ್ಲ ಆದ್ದರಿಂದ ನೀರನ್ನು ಅಂತರ್ಜಲಕ್ಕೆ ಕಳಿಸಬೇಕು, ಹೀಗೆ ನೀರಿನ ಉಳಿತಾಯ ಮಾಡಿ ಸಮೃದ್ಧಿಯಾಗಿ ಇರುವಂತೆ ನೋಡಿಕೊಂಡಲ್ಲಿ ಬರವನ್ನು ಎದುರಿಸುವ ಪರಿಸ್ಥಿತಿ ಬರುವುದಿಲ್ಲ.

    ಹೊಸದಾಗಿ ಬೋರ್‍ವೆಲ್‍ಗಳನ್ನು ತೆಗೆಯುವ ಬದಲು ಇರುವ ಬೋರ್‍ವೆಲ್‍ಗಳ ಜಲ ಮರುಪೂರಣ ಮಾಡುವ ಕೆಲಸ ಆಗಬೇಕು. ಇತ್ತೀಚಿನ ಜೀವನಶೈಲಿಯಿಂದ ನೀರು ಹೆಚ್ಚು ಪೋಲಾಗುತ್ತಿರುವುದನ್ನು ತಪ್ಪಿಸಬೇಕು. ಜಲಾಮೃತ ಯೋಜನೆಯ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯವಾಗಿದ್ದು, ನೀರಿನ ಸಮಸ್ಯೆ ಕಡಿಮೆಯಾಗಲು ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಲಾಮೃತ ಯೋಜನೆಯ ಜಲಾನಯನ ಸಂಯೋಜಕ ಡಾ. ಎನ್.ಕೆ. ರಾಜೇಶ್‍ಕುಮಾರ್, ಸಂಯೋಜಕ ನರಸಿಂಹಯ್ಯ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ. ರಮೇಶ್, ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಆಯ್ದ ಗ್ರಾಮಪಂಚಾಯ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link