ಪಾವಗಡ :
ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಏ. 18 ರಿಂದ ತಾಲ್ಲೂಕಿನ ಎಲ್ಲಾ ಆಟೋ ಹಾಗೂ ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡುವುದರ ಮೂಲಕ ಆರಂಭವಾದ ಸೇವಾ ಯೋಜನೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಗಳಲ್ಲಿ ಸ್ಯಾನಿಟೈಸಿಂಗ್ ಮಾಡುತ್ತಾ ಭಯಾನಕ ಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುತ್ತಿದ್ದಾರೆ. ಶ್ರೀ ಶನಿಮಹಾತ್ಮ ದೇವಾಲಯದ ಆವರಣದಿಂದ ಆರಂಭವಾದ ಔಷಧಿ ಸಿಂಪಡಿಸುವಿಕೆಯು ಯಶಸ್ವಿಯಾಗಿ ನಡೆಯುತ್ತಾ ಸಾಗಿದೆ. ವೈ.ಇ.ಆರ್. ಕಾಲೇಜು ಮುಂತಾದ ವಿದ್ಯಾ ಸಂಸ್ಥೆಗಳಿಗೂ ಸ್ಯಾನಿಟೈಸರ್ ಸಿಂಪಡಣೆಯನ್ನು ನಡೆಸಲಾಗಿದೆ.
ಏ. 25 ರಂದು ಕಫ್ರ್ಯೂ ಪ್ರಯುಕ್ತ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಆಹಾರ ಪೊಟ್ಟಣವನ್ನು ವಿತರಿಸಲಾಯಿತು. ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಸರ್ಕಾರಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳಿಗೆ ಔಷಧಿ ಸಿಂಪಡಿಸಿದುದಲ್ಲದೆ ಮಧ್ಯಾನ್ಹ ಎಲ್ಲರಿಗೂ ಆಹಾರ ಪೊಟ್ಟಣವನ್ನು ವಿತರಿಸಲಾಗಿದೆ. ಕೇವಲ ಪ್ರಯಾಣಿಕರಿಗಷ್ಟೆ ಅಲ್ಲದೆ, ಬಸ್ ಚಾಲಕರು, ಕಂಡಕ್ಟರ್ ರವರಿಗೂ ಆಹಾರ ವಿತರಣೆ ಮಾಡಿ ಅವರ ಹಸಿವನ್ನು ನೀಗಿಸಿದಂತಾಯಿತುಈ ಸಂದರ್ಭದಲ್ಲಿ ಸ್ವಾಮಿ ಜಪಾನಂದಜೀ ರವರು ಈ ಕಾರ್ಯ ಯೋಜನೆಗಳನ್ನು ಎಂದಿನಂತೆ ಅಂದರೆ ಕಳೆದ ವರ್ಷ ಹೇಗೆ ಸಾವಿರಾರು ಜನರಿಗೆ ಸಹಾಯ ನೀಡಿದ ರೀತಿಯಲ್ಲೇ ಈ ಬಾರಿಯೂ ತಮ್ಮ ಕೈಲಾದ ಸೇವೆಯನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಪ್ರತಿ ಶನಿವಾರ ಮತ್ತು ಭಾನುವಾರ ಆಹಾರ ಪೊಟ್ಟಣಗಳನ್ನು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಪರಾಹ್ನ 12.30 ರಿಂದ 1.30 ರವರೆಗೆ ನಿಗದಿಯಂತೆ ವಿತರಿಸಲಾಗುತ್ತ್ತಿದೆ. ಸಂಕಷ್ಟದಲ್ಲಿರುವ ಪ್ರಯಾಣಿಕರು, ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಸಹಾಯವಾಗುವಂತೆ ಕುಡಿಯುವ ನೀರಿನ ಪಾಕೆಟ್ ಜೊತೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತ್ತಿದೆ.
ಇದೇ ಸಂದರ್ಭದಲ್ಲಿ ಅತ್ಯಂತ ಬಡತನದಿಂದ ಕೂಲಿಗಳು ದೊರೆಯದೆ, ಸರಿಯಾದ ಆಹಾರ ದೊರೆಯದೆ ಬಳಲುತ್ತಿರುವವರಿಗೆ ಉಚಿತವಾಗಿ ದಿನಸಿ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಕಡು ಬಡವರಿಗೆ ವಿಶೇಷವಾಗಿ ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ, ರಸ್ತೆ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡಲು ಯೋಜನೆಯೊಂದನ್ನು ರೂಪಿಸಲಾಗಿದೆ. ಸರ್ಕಾರದ ಕಫ್ರ್ಯೂ ನಿಯಮಗಳ ಹಾಗೂ ಕೋವಿಡ್‍ನ ಎರಡನೇ ಅಲೆಯ ಪರಿಣಾಮವಾಗಿ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವವರಿಗೆ ಆದ್ಯತೆಯನ್ನು ಕೊಡಲಾಗುತ್ತ್ತಿದೆ. ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಿಗೆ ಹಾಗೂ ನಿರ್ವಾಹಕರಿಗೆ ದಿನಸಿ ಕಿಟ್‍ಗಳನ್ನು ನೀಡುವ ವಿಶೇಷ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇನ್ಫೋಸಿಸ್ ಫೌಂಡೇಷನ್ನಿನ ಸಹಕಾರದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೋವಿಡ್ 19ರ ಎರಡನೆ ಅಲೆಯು ಅತ್ಯಂತ ಪರಿಣಾಮಕಾರಿಯಾಗಿದ್ದು ರೂಪಾಂತರಿ ವೈರಸ್‍ನ ಭಯಂಕರ ಮರಣ ಮೃದಂಗ ಇರುವ ಸಂದರ್ಭದಲ್ಲಿ ಈ ಬಾರಿ ಕೇವಲ ದಿನಸಿ ಕಿಟ್‍ಗಳನ್ನು ನೀಡಲು ನಿರ್ಧರಿಸಲಾಗಿದೆ. ಕಾರಣ ಎಲ್ಲರಿಗೂ ತಿಳಿದಿರುವಂತೆ ಭಯಾನಕ ಸೋಂಕಿನ ವಾತಾವರಣದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸ್ವಾಮಿ ಜಪಾನಂದಜೀರವರು ತಿಳಿಸಿದ್ದಾರೆ.
ಹಸಿದ ದನಕರುಗಳಿಗೂ ಮೇವನ್ನು ವಿತರಿಸುವ ವಿಶೇಷ ಕಾರ್ಯಕ್ರಮ :
ಜನರಿಗೆ ಅನೇಕಾನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಸ್ವಾಮಿ ಜಪಾನಂದಜಿ ಹಾಗೂ ಇನ್ಫೋಸಿಸ್ ಸಂಸ್ಥೆ ಈ ಭಯಂಕರ ಸ್ಥಿತಿಯಲ್ಲಿ ಪಶುಗಳಿಗೆ ಅದರಲ್ಲಿಯೂ ರೈತನ ಜೀವನಾಧಾರವಾಗಿರುವ ಹಾಗೂ ಎಲ್ಲರಿಗೂ ಅಮೃತಸದೃಶ ಕ್ಷೀರವನ್ನು ನೀಡುವ ಪಶುಗಳಿಗೆ, ದನಕರುಗಳಿಗೆ ಮೇವನ್ನು ಮುಂದಿನ ಅಂದರೆ ಮುಂಗಾರು ಮಳೆ ಬರುವ ತನಕ ನೀಡಲು ಯೋಜನೆಯನ್ನು ರೂಪಿಸಲಾಗಿದೆ. ಈ ಬಾರಿ ಪಶುಗಳನ್ನು ಅಧಿಕಾರಿಗಳ ಮುಂದೆ ಕರೆತಂದು ತನ್ಮೂಲಕ ನೋಂದಾಯಿಸಿಕೊಂಡವರಿಗೆ ಮಾತ್ರ ಮೇವನ್ನು ನೀಡಲು ನಿರ್ಧರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವನ್ನು ಸಂಸ್ಥೆಯ ಆವರಣದಲ್ಲಿಯೇ ನೀಡಲು ನಿರ್ಧರಿಸಲಾಗಿದೆ. ಈ ಬಹುಮುಖ್ಯವಾದ ಹಾಗೂ ದೇಶದ ಬೆನ್ನೆಲುಬಾಗಿರುವ ರೈತರಿಗೆ ಒಂದು ಸುವರ್ಣಾವಕಾಶ ಎಂದು ಸ್ವಾಮಿ ಜಪಾನಂದಜೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಜನರು ಸಂಪೂರ್ಣವಾಗಿ ಅಲೆದಾಡುವುದನ್ನು ನಿಯಂತ್ರಣಗೊಳಿಸುವ ಕಾರಣದಿಂದ ಗೋವುಗಳಿಗೆ ಸಂಸ್ಥೆಯ ಆವರಣದಲ್ಲಿಯೇ ಮೇವು ಮತ್ತು ನೀರನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ.
ಸರ್ಕಾರದ ಸೂಚನೆಗಳನ್ನು ಹಾಗೂ ಪೊಲೀಸ್ ಇಲಾಖೆಯ ಮತ್ತುಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಈ ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಅಣಿಯಾಗುತ್ತಿದ್ದೇವೆ ಎಂದು ಜಪಾನಂದಜೀ ತಿಳಿಸಿರುತ್ತಾರೆ. ಒಟ್ಟಿನಲ್ಲಿ ಯಾವುದೇ ರೀತಿಯ ವಿಕೋಪ ಉಂಟಾದಾಗ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಜೊತೆಯಾಗಿ ಕಳೆದ ಎರಡೂವರೆ ದಶಕದಿಂದ ಏಕಪ್ರಕಾರವಾಗಿ ಕುಡಿಯುವ ನೀರು, ದನಕರುಗಳಿಗೆ ಮೇವು, ಜನರಿಗೆ ಆಹಾರ ಧಾನ್ಯದ ಚೀಲ ವಿತರಣೆ, ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ, ಶಿಕ್ಷಣ ಇಲಾಖೆಗೆ ಒಂದು ನೂತನ ಯೋಜನೆಯಾಗಿ ದೂರ ತರಂಗ ಶಿಕ್ಷಣದ ಯೋಜನೆಯನ್ನು ಸರಿಸುಮಾರು 40 ಸರ್ಕಾರಿ ಪ್ರೌಢಶಾಲೆಗಳಿಗೆ ಈಗಾಗಲೇ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಹೀಗೆ ಆಧ್ಯಾತ್ಮ, ಅಕ್ಷರ, ಆಸರೆ ಹಾಗೂ ಆಹಾರ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮ ನಿಜಕ್ಕೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಅನುಷ್ಠಾನಕ್ಕೆ ತರಲು ಅಹರ್ನಿಷಿ ದುಡಿಯುತ್ತಿರುವ ಸಂಸ್ಥೆಯಾಗಿದೆ ಎಂದರೆ ತಪ್ಪಾಗಲಾರದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ