ಎಸ್.ನಾಗಣ್ಣ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡಿಸಲು ಪ್ರಯತ್ನಿಸುವೆ : ಎಚ್.ಎಂ.ರೇವಣ್ಣ

 ತುಮಕೂರು:

      ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರಿಗೆ ವಿಧಾನ ಪರಿಷತ್‍ನಲ್ಲಿ ಸ್ಥಾನ ಕೊಡಿಸಲು ಶ್ರಮ ವಹಿಸುವೆ ಎಂದು ಮಾಜಿ ಸಚಿವರು, ಹಾಲಿ ಶಾಸಕರಾದ ಎಚ್.ಎಂ.ರೇವಣ್ಣ ತಿಳಿಸಿದರು.

      ಎಸ್.ನಾಗಣ್ಣನವರ ಅಭಿನಂದನಾ ಸಮಿತಿಯಿಂದ ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರಗತಿಯ ಬೆರಗು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಅವರು, ಮೇಲ್ಮನೆ ರಾಜಕೀಯೇತರ ವ್ಯಕ್ತಿಗಳಿಗೆ ಇರುವಂತಹ ಮನೆ. ರಾಜಕೀಯದವರಿಗಾಗಿ ಇರುವ ಸ್ಥಾನವಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅನುಭವಿಗಳು ಅಲ್ಲಿ ಇರಬೇಕು. ನಾಗಣ್ಣ ಅವರಂತಹವರು ಈ ಸ್ಥಾನಕ್ಕೆ ಬರಬೇಕು. ಅದಕ್ಕಾಗಿ ನಾನು ಶ್ರಮಿಸುತ್ತೇನೆ. ಇದಕ್ಕೆ ಕೇಂದ್ರ ರಾಜಣ್ಣ ದನಿಗೂಡಿಸಲಿ ಎಂದರು.

      ಎಸ್.ನಾಗಣ್ಣ ಅವರಿಗೂ ನನಗೂ ಬಹಳ ವರ್ಷಗಳ ನಂಟು. ಹಿಂದೆ ಸಿದ್ಧರಾಮಯ್ಯನವರು ಅಹಿಂದ ಸಂಘಟನೆಗೆ ಮುಂದಾದಾಗ ತುಮಕೂರು ಜಿಲ್ಲೆಯಲ್ಲಿ ನಮಗೆ ಅತಿ ಹೆಚ್ಚು ಸಹಕಾರ ನಾಗಣ್ಣ ಅವರಿಂದ ಸಿಕ್ಕಿತು. ನಮಗೆ ಮಾತ್ರವಲ್ಲ, ತುಮಕೂರಿನಲ್ಲಿ ಹಲವು ಸಂಘ ಸಂಸ್ಥೆಗಳಿಗೆ ಇವರು ನೆರವಾಗಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದುಕೊಂಡು ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ. ಹೀಗಾಗಿಯೇ ಇವರು ಅನೇಕ ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು ಎಂದರು.

      ಜನರ ಪ್ರೀತಿಯನ್ನು ಎಷ್ಟು ಗಳಿಸಿದ್ದಾರೋ ಅಷ್ಟೇ ಕಷ್ಟವನ್ನೂ ಅನುಭವಿಸಿದ್ದಾರೆ. ಅದು ಎಲ್ಲರಿಗೂ ಗೊತ್ತಾಗುವುದಿಲ್ಲ. ಆ ಕಷ್ಟ ಏನೆಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರಜಾಪ್ರಗತಿ ಒಂದು ಶ್ರೇಷ್ಠ ಪತ್ರಿಕೆಯಾಗಿ ಹೊರಬರಲು ಅವರು ಹಾಕಿರುವ ಶ್ರಮ ಅವಿಸ್ಮರಣೀಯ. ನಾಗಣ್ಣ ಅವರು ಪತ್ರಿಕೋದ್ಯಮಿಯಾಗಿ, ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಂತರಿಕ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು ಎಂದರು.

   ಗುರಿ ಇರಬೇಕು:

      ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಮಾತನಾಡಿ ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡುವಾಗ ಗುರಿ ಇರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಅಂತಹ ಗುರಿ ಇಟ್ಟುಕೊಂಡು ನಾಗಣ್ಣ ಅವರು ಇಂದು ಈ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಬಣ್ಣಿಸಿದರು.

     ಈ ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ ಮನುಷ್ಯ ಮಾತ್ರ ಆಗಲ್ಲ. ಹುಟ್ಟು ಮತ್ತು ಸಾವಿನ ನಡುವೆ ನಮ್ಮ ಸಾಧನೆ ಏನು ಎಂಬುದನ್ನು ಕಂಡುಕೊಳ್ಳಬೇಕು. ಹಳ್ಳಿಯಿಂದ ನಗರಕ್ಕೆ ಬಂದ ನಾಗಣ್ಣ ಇಂದು ವಿದ್ಯೆಯಿಂದ ಈ ಸಾರ್ಥಕತೆ ಪಡೆದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆ ದಿನಗಳಲ್ಲಿ ನಾಗಣ್ಣನವರು ಶಾಲೆಗೆ ಹೋಗದಿದ್ದರೆ, ವಿದ್ಯೆ ಕಲಿಯದಿದ್ದರೆ ಇಂದು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದರು.

      ಅನುಭವವು ಜೀವನವನ್ನು ರೂಪಿಸುತ್ತದೆ ಎಂಬುದಕ್ಕೆ ನಾಗಣ್ಣ ಅವರೇ ಸಾಕ್ಷಿ. ಅವರು ಹಲವು ಕಷ್ಟ ಸುಖಗಳನ್ನು ಅನುಭವಿಸಿದ್ದಾರೆ. ಇವರು ಇತರೆಯವರಿಗೆ ರೋಲ್ ಮಾಡಲ್ ಆಗಿದ್ದಾರೆ ಎಂದರು.

      ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಲವು ಯೋಜನೆಗಳನ್ನು ಜಾರಿಗೆ ತಂದರು. ಅನ್ನಭಾಗ್ಯ, ವಿದ್ಯಾಸಿರಿ, ಶೂ ಭಾಗ್ಯ ಇತ್ಯಾದಿಗಳು. ಶೂ ಭಾಗ್ಯ ನನ್ನ ಒತ್ತಾಯವಾಗಿತ್ತು. ಅನ್ನಭಾಗ್ಯ ಜಾರಿಗೆ ತರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಚಿಕ್ಕಂದಿನಲ್ಲಿ ಅನ್ನಕ್ಕಾಗಿ ಅನುಭವಿಸಿದ ಪ್ರಸಂಗಗಳನ್ನು ಹೇಳುತ್ತಿದ್ದರು. ಅದನ್ನು ನಿವಾರಿಸಲೆಂದೇ ಇಂತಹ ಯೋಜನೆಗಳಿಗೆ ಕೈ ಹಾಕಿದರು. ಅವರಿಗೆ ಆ ಕಷ್ಟ ಗೊತ್ತಿತ್ತು. ಅದೇ ರೀತಿಯಲ್ಲಿ ಎಸ್.ನಾಗಣ್ಣ ಅವರಿಗೂ ಕಷ್ಟ ಏನೆಂಬುದು ಗೊತ್ತು.

      ಪತ್ರಿಕೆ ಎಂದರೆ ಬ್ರಾಹ್ಮಣರು ನಡೆಸುವ ಕ್ಷೇತ್ರ ಎಂದೇ ಪರಿಗಣಿತವಾಗಿದ್ದ ಈ ಸಮಾಜದಲ್ಲಿ ನಾಗಣ್ಣನವರು ಒಂದು ಕೆಳ ಸಮುದಾಯದಿಂದ ಬಂದು ಪತ್ರಿಕೆಯನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆಂದರೆ ಅವರಲ್ಲಿರುವ ಛಲಗಾರಿಕೆ ಸಾಕ್ಷಿ. ಟಿ.ವಿ. ಮಾಧ್ಯಮಕ್ಕೂ ಅವರು ಕೈ ಹಾಕಿದರು. ಇಂದು ಎಷ್ಟೋ ಮಂದಿ ಕೋಟ್ಯಧಿಪತಿಗಳು ಟಿ.ವಿ. ಮಾಧ್ಯಮ ಆರಂಭಿಸಿ ಅದನ್ನು ನಿಭಾಯಿಸಲಾಗದೆ ಆರ್ಥಿಕ ಸಂಕಷ್ಟದಿಂದ ಅದನ್ನು ಮುಚ್ಚಿದ್ದಾರೆ. ಆದರೆ ನಾಗಣ್ಣನವರು ಛಲಗಾರಿಕೆಯಿಂದ ನಡೆಸುತ್ತಿದ್ದಾರೆ ಎಂದರು.

      ಹಿರಿಯ ಪತ್ರಕರ್ತ ಶೇಷಚಂದ್ರಿಕಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಮಾಜದಲ್ಲಿ ರಾಜಕಾರಣಿಗಳನ್ನು ಅಥವಾ ಇತರೆ ಕ್ಷೇತ್ರದವರನ್ನು ಅಭಿನಂದಿಸುವ ಕಾರ್ಯಗಳನ್ನು ನೋಡಿದ್ದೇವೆ. ಇಲ್ಲಿ ಪತ್ರಕರ್ತರನ್ನು ಅಭಿನಂದಿಸುತ್ತಿದ್ದಾರೆಂದರೆ ಮೆಚ್ಚತಕ್ಕ ಕೆಲಸ. ಎಸ್.ನಾಗಣ್ಣ ಸಣ್ಣ ಪತ್ರಕರ್ತನಾದರೂ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಮೌಲ್ಯ ಉಳಿಸಿದ್ದಾರೆ:

      ಪತ್ರಕರ್ತ ಎಸ್.ನಾಗಣ್ಣ ಅವರು ಪತ್ರಿಕಾ ಕ್ಷೇತ್ರದಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಆ ಮೌಲ್ಯಗಳನ್ನು ಬಿಟ್ಟು ಎಂದೂ ರಾಜಿ ಮಾಡಿಕೊಂಡವರಲ್ಲ. ಹೀಗಾಗಿಯೇ ತುಮಕೂರಿನಂತಹ ಪ್ರದೇಶದಿಂದ ಒಂದು ಶ್ರೇಷ್ಠ ಪತ್ರಿಕೆಯನ್ನು ಹೊರತರಲು ಸಾಧ್ಯವಾಗಿದೆ. ಮೌಲ್ಯ ಇರುವಂತಹ ಪತ್ರಿಕೆಗಳು ಉಳಿಯುತ್ತವೆ ಎಂಬುದಕ್ಕೆ ನಾಗಣ್ಣನವರ ಪತ್ರಿಕೆಯೇ ಸಾಕ್ಷಿ. ಅವರ ಬಗ್ಗೆ ನನಗೆ ಅಪಾರ ಗೌರವ. ಶಿಸ್ತುಬದ್ಧ ಮನುಷ್ಯ. ಆದರ್ಶ ಪತ್ರಕರ್ತ. ಇವರು ಹೀಗೆಯೇ ಬೆಳೆಯಲಿ ಎಂದು ಹಿರಿಯ ಪತ್ರಕರ್ತರಾದ ಡಾ.ಪಾಟೀಲ ಪುಟ್ಟಪ್ಪ ತಿಳಿಸಿದರು.

     ನಾಗಣ್ಣನವರು ಅಹಂಕಾರವಿಲ್ಲದೆ ಬೆಳೆದು, ನಾಡಿನ ಅಹಂ, ಹೆಮ್ಮೆ, ಅಸ್ಮಿತೆಯೆನಿಸಿದ್ದಾರೆ. ಇವರು ಶಾರದೆಯ (ಪತ್ನಿ) ಕೈ ಹಿಡಿದರು. ಶಾರದೆ (ಸರಸ್ವತಿ) ಇವರ ಕೈ ಬಿಡಲಿಲ್ಲ. ಇವರು ಬೆಳೆದ ರೀತಿ ನಮ್ಮಲ್ಲರಿಗೂ ಆದರ್ಶಪ್ರಾಯವಾದುದು. ಇವರ ಬೆಳವಣಿಗೆ ಇವರ ಮಕ್ಕಳಾದ ಮಧುಕರ್, ಶಿಲ್ಪ, ಸುಮಾರವರಿಗೆ ಇನ್ನೂ ಹೆಚ್ಚು ಬೆಳೆಯಲು ಮಾರ್ಗಸೂಚಿಯಾಗಿದೆ ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

      ಇವರನ್ನು ಮಿಸ್ಟರ್ ಕ್ಲೀನ್ ಎಂದರೂ ತಪ್ಪಿಲ್ಲ. ಪ್ರಗತಿಯ ಬೆರಗು ಅರ್ಥಪೂರ್ಣವಾದ ಶೀರ್ಷಿಕೆ. ನಾಗಣ್ಣನವರು ಪ್ರಗತಿಯ ಬೆಳಕೂ ಕೂಡ ಹೌದು. ಗ್ರಾಮೀಣ ಪ್ರದೇಶದಿಂದ ಬಂದು ಬಹು ದೊಡ್ಡ ಸಾಧನೆ ಮಾಡಿದ್ದಾರೆ. ಸಿದ್ದಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರ ಪ್ರತಿಫಲ ಇವರಲ್ಲಿ ಪತ್ರಿಕಾ ಕ್ಷೇತ್ರದಲ್ಲೂ ನ್ಶೆತಿಕತೆಯನ್ನು ತಂದು ಕೊಟ್ಟಿದೆ. ಇವರು ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕ, ಧಾರ್ಮಿಕ ಹೀಗೆ ತುಮಕೂರು ನಗರದ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ಪತ್ರಿಕಾ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನ್ನುತ್ತಾರೆ. ಆದರೆ ಅಷ್ಟು ಮಾತ್ರವಲ್ಲ, ಈ ಮಾಧ್ಯಮ ರುದ್ರನ ಮೂರನೆ ಕಣ್ಣು ಕೂಡ ಹೌದು. ಸಮಾಜದ ಎಲ್ಲಾ ಕೆಡುಕುಗಳನ್ನು ಸುಟ್ಟುಹಾಕಿ ಬಿಡುತ್ತದೆ. ಇಂದು ಸುದ್ದಿಯನ್ನು ಸಂಸ್ಕರಿಸುತ್ತಿಲ್ಲ, ಬದಲಾಗಿ ಕಸದಂತೆ ತುಂಬುತ್ತಿದ್ದಾರೆ. ಇದು ಹೀಗೆಯೆ ಮುಂದುವರೆದು ಮಾಧ್ಯಮ ಕ್ಷೇತ್ರದ ಪಾವಿತ್ರಯ ಕಾಪಾಡದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ. ಪತ್ರಕರ್ತ ನಾಗಣ್ಣನವರಂತೆ ಡೈನಾಮಿಕ್ ಆಗಿರಬೇಕೆ ಹೊರತು, ಡೈನಾಮೈಟ್ ಆಗಬಾರದು. ಅದು ತಾನೂ ಸಿಡಿದು ಇತರರನ್ನೂ ಸಿಡಿಸಿ ಹಾಳು ಮಾಡುತ್ತದೆ. ಇವರು ನಿಜಕ್ಕೂ ಜಾತ್ಯತೀತ ವ್ಯಕ್ತಿ. ನೀವೆಲ್ಲಾ ಇವರನ್ನು ಜಾತ್ಯತೀತವಾಗಿ ಅಭಿನಂದಿಸಿದ್ದೀರಿ. ನಿಜಕ್ಕೂ ನಾಗಣ್ಣನವರು ಸಾತ್ವಿಕ ಸಾಮಥ್ರ್ಯದ ವ್ಯಕ್ತಿ. ಇದನ್ನು ಮಾಡಿ, ಇದನ್ನು ಮಾಡಬೇಡಿ ಎಂದು ನಮಗೆ ಸಲಹೆ ನೀಡುವಷ್ಟು ನೈತಿಕ ಸಾಮಥ್ರ್ಯ ಬೆಳೆಸಿಕೊಂಡಿದ್ದಾರೆ ಎಂದರು.

 
       ನಾಗಣ್ಣನವರು ಹೃದಯವಂತ, ವಿವೇಕಿ, ಪ್ರಜ್ಞಾವಂತ ಪತ್ರಕರ್ತ. ವಿಷಯದ ಸತ್ಯಾಸತ್ಯತೆಯ ಜೊತೆಗೆ ಸಾಮಾಜಿಕ ಬದ್ದತೆಯೂ ಬೇಕು. 30 ವರ್ಷಗಳಿಂದ ಪ್ರಜಾ ಪ್ರಗತಿ ಓದುತ್ತಿದ್ದೇನೆ. ಒಂದೇ ಒಂದು ದಿನ ಕೂಡ ದ್ವೇಷದಿಂದ ಸುದ್ದಿ ಪ್ರಕಟಿಸಿ ಮಾರನೆ ದಿನ ಕ್ಷಮಿಸಿ ಎಂಬ ತಿದ್ದುಪಡಿ ಪ್ರಕಟಿಸಿದ್ದನ್ನು ನಾನು ಕಂಡಿಲ್ಲ. ಚಿಕ್ಕ ಚಿಕ್ಕ ಧಾರ್ಮಿಕ ಸುದ್ದಿ ಕೂಡ ಇಲ್ಲಿ ಬೆಳಕು ಕಾಣುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಎಸ್.ನಾಗಣ್ಣ ಅವರ ಬಗ್ಗೆ ಹೇಳಿದ ಮಾತುಗಳು.

      ಇಡೀ ಜಿಲ್ಲೆಯ ಚಿಕ್ಕಚಿಕ್ಕ ಸುದ್ದಿ ಕೂಡ ಪ್ರಕಟವಾಗುತ್ತೆ. ನಾನು ನಿತ್ಯವೂ ಪ್ರಜಾಪ್ರಗತಿ ಓದಲು ಹೆಚ್ಚು ಸಮಯ ವಿನಿಯೋಗಿಸುವೆ. ವಿದೇಶದಲ್ಲಿದ್ದರೂ ಇಂಟರ್ ನೆಟ್ ಮೂಲಕ ಪ್ರಜಾ ಪ್ರಗತಿ ಓದುತ್ತೇನೆ. ಇವರು ಒಳ್ಳೆಯ ಮಾನವತಾವಾದಿ. ಸಮಾಜ, ಧರ್ಮ, ಶಿಕ್ಷಣ, ಆಧ್ಯಾತ್ಮ ಕುರಿತು ಕಾಳಜಿವುಳ್ಳ ವ್ಯಕ್ತಿ. ಮಾನವೀಯತೆಯ ಸಾಕಾರ ಮೂರ್ತಿ, ಸಾಮಾಜಿಕ ಒಳಿತು-ಕೆಡುಕುಗಳನ್ನು ತನ್ನೆರಡು ಕಣ್ಣುಗಳಂತೆ ಕಾಣುವ ವ್ಯಕ್ತಿರತ್ನ. ಕೇರಳ, ಕೊಡಗು ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ. ರಾಮಕೃಷ್ಣ ಆಶ್ರಮ ಕಟ್ಟಡ ನಿರ್ಮಾಣದಲ್ಲಿ ಕೂಡ ಸಹಕರಿಸಿದ್ದಾರೆ. ಪತ್ರಿಕೋದ್ಯಮಿಯ ಮುಖದಲ್ಲಿ ಅಪರೂಪವೆನಿಸಿದ ನಗುವನ್ನು, ಜೊತೆಗೆ ಕಣ್ಣೀರು ಎರಡನ್ನೂ ನಾನು ಇವರಲ್ಲಿ ಕಂಡಿದ್ದೇನೆ ಎಂದರು.

      ಇವರ ಬದುಕಿನ ಹತ್ತು-ಹಲವು ನೋವಿವ ಘಟನೆಗಳಲ್ಲಿ ನಾನು ಭಾಗಿಯಾಗಿದ್ದೇನೆ. ನಾಗಣ್ಣನವರ ಸಾಧನೆಯ ಹಿಂದೆ ತನ್ನ ಆರೋಗ್ಯವನ್ನೆ ಒತ್ತೆ ಇಟ್ಟ ಪತ್ನಿ ಶಾರದಮ್ಮ ಇದ್ದಾರೆ. ತುಮಕೂರಿನ ಜನತೆ ಇವರನ್ನು ಅಭಿನಂದಿಸಿ ತಮ್ಮ ಹಿರಿತನ ಮೆರೆದಿದ್ದಾರೆ ಎಂದರು.

      ಅಂದು ಕೆಳಗೆ ಬಿದ್ದವರನ್ನು ಮೇಲೆತ್ತುವುದು ಮಾಧ್ಯಮ ಧರ್ಮವಾಗಿತ್ತು. ಇಂದು ಮೇಲಿರುವವರನ್ನು ಕೆಳಗೆ ಬೀಳಿಸುವುದು ಧರ್ಮವಾಗಿದೆ. ಉದಾಹರಣೆಗೆ ಸಿದ್ದರಾಮಯ್ಯನವರು ಲಿಂಗಾಯಿತ ಧರ್ಮ ಒಡೆಯದಿದ್ದರೂ ಮಾಧ್ಯಮಗಳು ಹಾಗೆ ಬಿಂಬಿಸಿದವು. ಇದೊಂದು ಉದಾಹರಣೆಯಷ್ಟೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು. 

      ನಾಗಣ್ಣನವರ ಮೇಲೆ ನಡೆದಾಡುವ ದೇವರಾದ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಕೃಪಾಶೀರ್ವಾದ ಇರುವುದರಿಂದಲೆ ಇಷ್ಟು ಎತ್ತರಕ್ಕೆ ಬೆಳೆದಿರುವುದು. ಇವರು ಗಳಿಸಿದ್ದಕ್ಕಿಂತ ಕಳೆದುಕೊಂಡಿರುವುದೇ ಹೆಚ್ಚು. ನನಗೆ ಯಾವಾಗಲೂ `ಸ್ವಾಮಿಗಳೆ ನೀವು ಹೆಚ್ಚು ಓದಿಕೊಳ್ಳಬೇಕು’ ಎಂದು ಹೇಳುತ್ತಾರೆ. ಪ್ರಸಾದಕ್ಕೆ ವಿಷ ಬೆರೆಸುವ ಸ್ವಾಮಿಗಳನ್ನು ಕಂಡಾಗ ಇವರು ಹೇಳುವ ಜ್ಞಾನದ ಮಹತ್ವ ಏನು ಎಂದು ಅರ್ಥವಾಗುತ್ತದೆ. ಪ್ರಗತಿಯ ಬೆರಗು ಅಭಿನಂದನಾ ಗ್ರಂಥದಲ್ಲಿ ಸಿದ್ದಗಂಗಾ ಕ್ಷೇತ್ರದ ಶಿವಕುಮಾರ ಮಹಾಸ್ವಾಮಿಗಳಿಂದ ಹಿಡಿದು ಪಾಟೀಲ ಪುಟ್ಟಪ್ಪನವರ ತನಕ ಮೌಲ್ಯಯುತ ಲೇಖನ ಒಳಗೊಂಡಿದೆ. ಆದ್ದರಿಂದ ಇದು ಎಲ್ಲರೂ ಓದಲೇಬೇಕಾಗಿರುವ ಉತ್ತಮ ಗ್ರಂಥ ಎಂದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap