ಗುಬ್ಬಿ :
ಸಣ್ಣ ನೀರಾವರಿ ಖಾತೆ ನನಗೆ ಆತ್ಮ ತೃಪ್ತಿ ತಂದುಕೊಟ್ಟಿದೆ. ದೊಡ್ಡ ಖಾತೆಗಳು ದೊಡ್ಡ ಜನರ ಸೇವೆಗೆ ಸೀಮಿತವಾಗುತ್ತದೆ. ಗ್ರಾಮೀಣ ರೈತಾಪಿ ವರ್ಗದ ಸೇವೆಗೆ ಸಣ್ಣ ನೀರಾವರಿ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಕೆ.ರಾಂಪುರ ಗ್ರಾಮದಲ್ಲಿ ಸಚಿವರ ವಿಶೇಷ ಅನುದಾನದಲ್ಲಿ 3 ಕೋಟಿ ರೂಗಳ ರಸ್ತೆ ಅಭಿವೃದ್ದಿ ಕೆಲಸಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕಳೆದ ಬಾರಿ ಗುಬ್ಬಿ ತಾಲ್ಲೂಕಿನ ಕೆಲ ಗ್ರಾಮದಲ್ಲಿ ಮಹಿಳೆಯರ ಬೇಡಿಕೆಗೆ ಕೊಟ್ಟ ಮಾತಿನಂತೆ ರಸ್ತೆ ಅಭಿವೃದ್ದಿಗೆ 60 ಲಕ್ಷ ರೂಗಳನ್ನು ಕೆ.ರಾಂಪುರ ರಸ್ತೆಗೆ, 60 ಲಕ್ಷ ರೂ ಕಾಡಶೆಟ್ಟಿಹಳ್ಳಿ ರಸ್ತೆಗೆ ಮತ್ತು ಡಿ.ರಾಂಪುರ ಗ್ರಾಮದಲ್ಲಿನ ಕಡಬ ರಸ್ತೆಗೆ 1.80 ಕೋಟಿ ರೂಗಳನ್ನು ಮಂಜೂರು ಮಾಡಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದೇ ಕೆಲಸ ಬೃಹತ್ ಖಾತೆಗಳಲ್ಲಿ ಮಾಡಲಾಗದು. ಬಡ ಮತ್ತು ಮಧ್ಯಮ ವರ್ಗದ ಜನರ ತಲುಪುವ ಸಣ್ಣ ಖಾತೆಗಳು ನಿಜವಾದ ಸೇವೆಗೆ ಅರ್ಹ ಎಂದರು.
ಲಿಂಗಾಯಿತ ಸಮುದಾಯದ ಒಳ ಜಗಳಗಳ ಲಾಭವನ್ನು ಪಡೆದುಕೊಳ್ಳುವವರು ನಮ್ಮನ್ನು ಆಳುತ್ತಾರೆ. ಜಿಲ್ಲೆಯಲ್ಲಿ ನಮ್ಮ ಶಕ್ತಿ ಕುಂದುವ ಮುನ್ನಾ ಸಂಘಟನೆಯಲ್ಲಿ ತೊಡಗಿ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಸಂಪರ್ಕ ಮತ್ತು ಸಂಬಂಧ ಚೆನ್ನಾಗಿದ್ದರೆ ಜನಪರ ಕೆಲಸವನ್ನು ಮಾಡಬಹುದಾಗಿದೆ. ಸರ್ಕಾರದ ಬಳಿ ತೆರಳಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾದ ಚಂದ್ರಶೇಖರಬಾಬು ಏಳು ಕೋಟಿ ರೂಗಳ ಕೆಲಸ ನಿಟ್ಟೂರು ಹೋಬಳಿಯಲ್ಲಿ ನಡೆಸಿರುವುದು ಸಾಕ್ಷಿಯಾಗಿದೆ. ಎಂದ ಅವರು ಜಿಲ್ಲೆಗೆ ಬಜೆಟ್ನಲ್ಲಿ ವಿಶೇಷ ಅನುದಾನ ಬರಲಿಲ್ಲ ಎಂಬ ದೂರುಗಳು ಕೇಳಿವೆ. ಆದರೆ ಪ್ರತಿವರ್ಷ ಜಿಲ್ಲೆಗೆ ಸಾಕಷ್ಟು ನಿರೀಕ್ಷೆ ಮಾಡಬಾರದು. ಈ ಬಾರಿ ಕೋವಿಡ್ ನೀಡಿದ ಹೊಡೆತ ಎಲ್ಲರಿಗೂ ತಿಳಿದಿದೆ. ಆದರೂ ನಮ್ಮ ಜಿಲ್ಲೆಗೆ ಸಾಕಷ್ಟು ಅನುದಾನಗಳು ಬಜೆಟ್ ಹೊರತಾಗಿಯೂ ಬರಲಿದೆ ಎಂದು ಭರವಸೆ ನೀಡಿದರು.
ಬಂಡವಾಳಶಾಹಿಗಳ ಸೇವೆ ಮಾಡುವ ಖಾತೆಗಳಿಗೆ ಆಸೆ ಪಡಲಿಲ್ಲ. ಸಣ್ಣ ರೈತರ ಬದುಕು ಹಸನಗೊಳಿಸುವ ಕೆಲಸಕ್ಕೆ ಸಹಾಯವಾದ ಸಣ್ಣ ನೀರಾವರಿ ಖಾತೆ ತುಮಕೂರು ಮತ್ತು ಹಾಸನ ಜಿಲ್ಲೆಗೆ ಕೆಲಸ ಮಾಡಲು ಅವಕಾಶ ಮಾಡಿತ್ತು. ಈ ಬಾರಿ ಹೇಮಾವತಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ಹರಿದು ಕೃಷಿ ಚಟುವಟಿಕೆಗೆ ಸಹಾಯವಾಯಿತು. ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡರು ಅಚ್ಚಕಟ್ಟಾಗಿ ನೀರಾವರಿ ಖಾತೆ ನಿಬಾಯಿಸಿದ್ದಕ್ಕೆ ಪ್ರಶಂಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 120 ಕೆರೆಗೆ ನೀರು ಹರಿಸಲು 150 ಕೋಟಿ ರೂ ಗಳ ಕೆಲಸಕ್ಕೆ ಚಾಲನೆ ನೀಡಿದೆ. ಜೋತೆಯಲ್ಲಿ ತಿಪಟೂರು ತಾಲ್ಲೂಕಿಗೂ ಹಲವು ಯೋಜನೆಗೆ ಅಸ್ತು ನೀಡಿದ ಬಳಿಕ ಜಿಲ್ಲಾ ಸಚಿವನಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೂ ಹೇಮೆ ಹರಿಸುವ ಯೋಜನೆ ಕೆಲಸಕ್ಕೆ ಇಂದು ಶಾಸಕರ ವಿಶೇಷ ಸಭೆ ನಡೆಸಿ ಕೆಲಸ ರೂಪುರೇಷೆ ಸಿದ್ದಪಡಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಮುಖಂಡ ಎಸ್.ಡಿ.ದಿಲೀಪ್ಕುಮಾರ್, ಗ್ರಾಪಂ ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್, ಎನ್.ಬಿ.ರಾಜಶೇಖರ್, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್, ಪತ್ರೆ ದಿನೇಶ್, ಆರ್.ಡಿ.ಸತೀಶ್, ಪಂಚಾಯತ್ರಾಜ್ ಇಇ ರವೀಶ್, ಎಇಇ ಶ್ರೀಪಾದ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ