ಉತ್ತರ ಕನ್ನಡ:
ಆಸ್ತಿಗಾಗಿ ನಾಲ್ವರನ್ನು ಕೊಲೆ ಮಾಡಿದ್ದ ಅಪ್ಪ ಮತ್ತು ಮಗನಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮಗ ವಿನಯ್ ಭಟ್ಗೆ ಗಲ್ಲು ಶಿಕ್ಷೆ ಮತ್ತು ಅಪ್ಪ ಶ್ರೀಧರ್ ಭಟ್ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 2023 ರ ಫೆಬ್ರುವರಿ 23ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿತ್ತು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಂಭು ಭಟ್ ಎಂಬವರು ಸುಮಾರು 6 ಏಕರೆ ಅಡಿಕೆ ತೋಟ ಹೊಂದಿದ್ದರು. ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಭಟ್ ಅನಾರೋಗ್ಯದಿಂದ 2022ರ ಸೆಪ್ಟೆಂಬರ್ 8ರಂದು ಮೃತಪಟ್ಟಿದ್ದರು. ಮೃತ ಶ್ರೀಧರ ಭಟ್ ಅವರ ಪತ್ನಿ ವಿದ್ಯಾ ಭಟ್ ಆಸ್ತಿಯಲ್ಲಿ ಪಾಲು ಕೊಡುವಂತೆ ಮನೆಯಲ್ಲಿ ನಿತ್ಯ ಜಗಳವಾಡಲು ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾ ಭಟ್ ಮಾವ ಶಂಭು ಭಟ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಆಸ್ತಿ ಹಂಚಿದ್ದರು.
ಇದಕ್ಕೆ, “ನಾದಿನಿಯರಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಡುತ್ತೀರಾ?” ಅಂತ ವಿದ್ಯಾ ಭಟ್ ನಿತ್ಯ ಕಿರುಕುಳ ಕೊಡುತ್ತಿದ್ದರು. ವಿದ್ಯಾ ಭಟ್ ಅವರ ತಂದೆ ಶ್ರೀಧರ ಭಟ್ ಹಾಗೂ ತಮ್ಮ ವಿನಯ್ ಭಟ್ ಕೂಡ ಈ ಗಲಾಟೆಯಲ್ಲಿ ವಿದ್ಯಾ ಪರ ವಹಿಸಿ ಕಿರುಕುಳ ನೀಡುತ್ತಿದ್ದರು. ಇದೇ ಆಸ್ತಿ ವಿಚಾರವಾಗಿ ವಿದ್ಯಾ ಭಟ್ ಪೋಷಕರು ಮತ್ತು ಶಂಭು ಭಟ್ ಅವರ ಕುಟುಂಬದವರ ನಡುವೆ 2023ರ ಫೆಬ್ರುವರಿ 23ರಂದು ಗಲಾಟೆಯಾಗಿತ್ತು. ಗಲಾಟೆ ತಾರಕಕ್ಕೇರಿದಾಗ, ಅಪರಾಧಿ ವಿನಯ್ ಭಟ್ ತನ್ನ ಕತ್ತಿಯಿಂದ ಶಂಭು ಭಟ್, ಅವರ ಪತ್ನಿ ಮಹಾದೇವಿ ಭಟ್ ಹಾಗೂ ಕಿರಿಯ ಮಗ ರಾಘವೇಂದ್ರ ಭಟ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದ. ರಾಘವೇಂದ್ರನ ಹೆಂಡತಿ ಕುಸುಮಾ ಭಟ್ ಅವರನ್ನು ಅಪರಾಧಿ ಶ್ರೀಧರ್ ಭಟ್ ಕತ್ತಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುವುದು ಕೂಡ ನ್ಯಾಯಾಲಯದಲ್ಲಿ ಸಾಬೀತಾಗಿದೆ.