ಜೆನ್ನಿ ಮಿಲ್ಕ್‌ ಗೆ ಬೀಗ : ಕತ್ತೆಗಳನ್ನ ನಂಬಿ ಬಂಡವಾಳ ಹೂಡಿದ್ದವರು ಕಂಗಾಲು!

ಬೀದರ್​

     ಕತ್ತೆಗೊಂದು ಕಾಲ ಬರುತ್ತೆ ಎನ್ನುವ ಹಾಗೆ ವಿಜಯನಗರ ಜಿಲ್ಲೆಯಾದ್ಯಂತ ರೈತರು ಲಕ್ಷ – ಲಕ್ಷ ಬಂಡವಾಳ ಹಾಕಿ ಕತ್ತೆಗಳನ್ನ ಖರೀದಿ ಮಾಡಿ ಹೈನುಗಾರಿಕೆ ಮಾಡಲು ಮುಂದಾಗಿದ್ದರು. ಆದ್ರೆ, ಕತ್ತೆಗಳನ್ನ ಕೊಟ್ಟಿದ್ದ ‘ಜಿನ್ನಿ ಮಿಲ್ಕ್’ ಕಂಪನಿ ಟ್ರೇಡ್ ಲೈಸೆನ್ಸ್ ಹೊಂದಿಲ್ಲ ಎಂದು ಅದನ್ನ ವಿಜಯನಗರ ಜಿಲ್ಲಾಡಳಿತ ಕ್ಲೊಸ್ ಮಾಡಿಸಿದೆ‌‌. ಹೀಗಾಗಿ ಕತ್ತೆ ಖರೀದಿ ಮಾಡಿದ್ದ ರೈತರಿಗೆ ಆತಂಕ ಶುರುವಾಗಿದೆ.

     ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಳೆದ ಆರು ತಿಂಗಳ ಹಿಂದೆ ‘ಜಿನ್ನಿ ಮಿಲ್ಕ್’ ಎಂಬ ಕಂಪನಿಯು ಆಫೀಸ್‌ಯೊಂದನ್ನ ತೆರೆದು ಕತ್ತೆಗಳ ಸಾಕಾಣಿಕೆ ಮಾಡಿ, ಹೈನುಗಾರಿಕೆಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯಿರಿ ಎಂದು ಸ್ಲೋಗನ್ ಹಾಕಿ ರೈತರಿಗೆ ಕತ್ತೆಗಳನ್ನ ಕೊಟ್ಟಿತ್ತು. ರೈತರು ಅದನ್ನ ನಂಬಿ ಮೂರು ಲಕ್ಷ ರೂಗೆ ಮೂರು ಕತ್ತೆ ಹಾಗೂ ಮೂರು ಕತ್ತೆ ಮರಿಗಳನ್ನ ಖರೀದಿ ಮಾಡಿದ್ದರು. ಬಳಿಕ ಒಂದು ಲೀಟರ್ ಕತ್ತೆ ಹಾಲಿಗೆ 2300 ರೂ ಕೊಟ್ಟು ಜಿನ್ನಿ ಕಂಪನಿಯೇ ಖರೀದಿ ಮಾಡುತ್ತಿತ್ತು. ಆದ್ರೆ, ಕಂಪನಿ ಟ್ರೇಡ್ ಲೈಸೆನ್ಸ್ ಹೊಂದಿಲ್ಲ ಎಂದು ವಿಜಯನಗರ ಜಿಲ್ಲಾಡಳಿತ ಆ ಆಫೀಸನ್ನ ಕ್ಲೋಸ್ ಮಾಡಿಸಿದೆ. ಹೀಗಾಗಿ ಆತಂಕಗೊಂಡ ಜನ, ಹೊಸಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಕ್ಯೂ ನಿಂತಿದ್ದಾರೆ.

    ಇನ್ನು ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ ದೂರು ನೀಡಲು ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ಹಾಸನ, ಗದಗ, ಬಳ್ಳಾರಿ ಸೇರಿದಂತೆ ನಾನಾ ಭಾಗದಿಂದ ಜನ ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ಪಟ್ಟಣ ಠಾಣೆ ಮುಂದೆ ಕ್ಯೂ ನಿಂತಿದ್ದಾರೆ. ಇದೀಗ ಲಕ್ಷಾಂತರ ಬಂಡವಾಳ ಹಾಕಿದ ಜನ್ರಿಗೆ ಜಿನ್ನಿ ಕಂಪನಿ ಮೋಸ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಹೌದು, ಹೊಸಪೇಟೆ ಆಫೀಸ್ ಕ್ಲೋಸ್ ಆದ ಬಳಿಕ ಜಿನ್ನಿ ಮಿಲ್ಕ್ ಕಂಪನಿ ಎಂಡಿ ತನ್ನ ಪೋನ್ ಸ್ವಿಚ್ಚ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನಂತೆ. ಹೀಗಾಗಿ ಜನರು ತಾವು ಹಾಕಿದ ಬಂಡವಾಳ ಹೋಯಿತು ಎಂದು ಆತಂಕಗೊಂಡಿದ್ದಾರೆ. ಹೀಗಾಗಿ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಎದುರು ದೂರು ನೀಡಲು ಸರತಿ ಸಾಲಿನಲ್ಲಿ ಕತ್ತೆ ಖರೀದಿ ಮಾಡಿದವರು ನಿಂತಿದ್ದಾರೆ.

   10 ಯೂನಿಟ್, 5 ಯೂನಿಟ್, 3 ಯೂನಿಟ್ ಕತ್ತೆ ಖರೀದಿ ಮಾಡಿದ್ದ ರೈತರು, ಕೋಟಿಗಟ್ಟಲೇ, ಲಕ್ಷಗಟ್ಟಲೇ ಹಣ ಬಂಡವಾಳ ಹಾಕಿದ್ದ ರೈತರು ತಮ್ಮ ಬಂಡವಾಳ ವಾಪಾಸ್ ಕೊಡಿಸಿಕೊಡುವಂತೆ ದೂರು ದಾಖಲು ಮಾಡುತ್ತಿದ್ದಾರೆ. ಜನರ ಸರತಿ ಸಾಲು ನೋಡಿ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೌಡಾಯಿಸಿ ಎಸ್ಪಿ ಶ್ರೀಹರಿಬಾಬು ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಇನ್ನು ರೈತರು ನೀಡಿದ ದೂರುಗಳನ್ನು ಪರಿಶೀಲನೆ ಮಾಡಿ ಆರೋಪಿ ಎಂಡಿ, ಮ್ಯಾನೇಜರ್ ಪತ್ತೆಗೆ ಟೀಂ ರಚನೆ ಮಾಡುವ ಸಾಧ್ಯತೆಯಿದೆ.

   ಒಟ್ಟಿನಲ್ಲಿ ಜಿನ್ನಿ ಮಿಲ್ಕ್​ ಕಂಪನಿ ರೈತರಿಗೆ ಕತ್ತೆ ಹೈನುಗಾರಿಕೆ ಆಸೆ ತೋರಿಸಿ ಲಕ್ಷಗಟ್ಟಲೇ ಬಂಡವಾಳ ಹಾಕಿಸಿಕೊಂಡು, ಹೊಸಪೇಟೆ ಆಫೀಸ್ ಕ್ಲೋಸ್ ಆಗುತ್ತಿದ್ದಂತೆ ಕಂಪನಿಯ ಎಂಡಿ ಪೋನ್ ಸ್ವಿಚ್ ಆಪ್ ಮಾಡಿ ಎಸ್ಕೇಪ್ ಆಗಿದ್ದಾರೆ ಅಂದರೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಪೋಲಿಸರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಈ ಪ್ರಕರಣವನ್ನ ತಾರ್ಕಿಕ ಅಂತ್ಯ ಕಾಣಿಸಬೇಕಿದೆ.

Recent Articles

spot_img

Related Stories

Share via
Copy link
Powered by Social Snap