ಹುಬ್ಬಳ್ಳಿ:
ರಾಜ್ಯ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ‘ಟೋಕನ್’ ಮೊರೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಶತಾಯ ಗತಾಯ ಉಪ ಚುನಾವಣೆ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ದೂರಿದರು. ಟೋಕನ್ ಹಂಚಿದ ಕಾಂಗ್ರೆಸ್, ಅದನ್ನು ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದ ಸಚಿವರು, ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲೋದು ನಾವೇ ಎಂದು ಜೋಶಿ ಹೇಳಿದರು. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ (ಎನ್‌ಡಿಎ) NDA ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಎಂಎಲ್‌ಸಿ ರವಿಕುಮಾರ್, ಸೀಮಾ ಮಸೂತಿ ಹಾಗೂ ಇತರರಿದ್ದರು.