ಡಿಸೆಂಬರ್‌ 8ರಂದು ಸಿಎಂ ಕರೆದ ಸಭೆಗೆ ಪ್ರಲ್ಹಾದ್‌ ಜೋಶಿ ಗೈರು : ಜೋಶಿಯವರು ಸಿಎಂ ಗೆ ಬರೆದಿರುವ ಪತ್ರದಲ್ಲಿ ಏನಿದೆ ….?

ನವದೆಹಲಿ

     ಸಂಸತ್‌ ಚಳಿಗಾಲದ ಅಧಿವೇಶನ ಹಾಗೂ ಕಾರ್ಯದೊತ್ತಡದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಸಂಸದರ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಎಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ  ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಭೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಕಾರಣ ಸಮೇತ ಸ್ಪಷ್ಟಪಡಿಸಿದರು. ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದಿದ್ದರೆ ಅನುಕೂಲವಾಗುತ್ತಿತ್ತು ಎಂದೂ ತಿಳಿಸಿದ್ದಾರೆ. 

     ʼʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಡಿಸೆಂಬರ್‌ 8ಕ್ಕೆ ನವದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿರುವ ಬಗ್ಗೆ ಬರೆದ ಪತ್ರ ಕೈ ಸೇರಿದೆ. ಆದರೆ ತಮಗೇ ತಿಳಿದಿರುವಂತೆ ಕೇಂದ್ರದಲ್ಲಿ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಹಣಕಾಸು ಇಲಾಖೆ ಮಸೂದೆ ಮಂಡನೆಯಾಗುತ್ತಿದೆ. ಹಾಗಾಗಿ ಸಚಿವರಾದ ನಮಗೆಲ್ಲ ಸಂಸತ್ ಅಧಿವೇಶನ ಹಾಗೂ ಇಲಾಖೆಗಳ ಕಾರ್ಯದೊತ್ತಡವಿದೆ.

    ಅಲ್ಲದೇ ಡಿಸೆಂಬರ್‌ 8ರಂದೇ ಹೊಸ ಮತ್ತು ನವೀಕೃತ ಇಂಧನ ಇಲಾಖೆ ಸಂಬಂಧ ಪ್ರಧಾನಿ ವಿಶೇಷ ಸಭೆಯಿದೆ. ವಿತ್ತ ಮಂತ್ರಾಲಯದಿಂದ ಸಂಸತ್ತಿನಲ್ಲಿ ಬಿಲ್ ಮಂಡನೆಗೊಳಿಸುವುದು ಮೊದಲೇ ನಿಗದಿಯಾಗಿತ್ತು. ಅದೇ ದಿನ ʼವಂದೇ ಮಾತರಂʼ ಗೀತೆಯ 150ನೇ ವರ್ಷಾಚರಣೆ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ 8ರಂದು ನಿಗದಿಪಡಿಸಿದ ಸಭೆಯಲ್ಲಿ ನಾವುಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲʼʼ ಎಂದು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಲ್ಲ ಕೇಂದ್ರ ಸಚಿವರ ಪರವಾಗಿ ಸಿಎಂಗೆ ಮರುಪತ್ರ ಬರೆದು ತಿಳಿಸಿದ್ದಾರೆ. 

    ಮುಖ್ಯಮಂತ್ರಿ ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ತಿಳಿಸಿರುವ ಸಚಿವ ಪ್ರಲ್ಹಾದ್‌ ಜೋಶಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ರೈಲ್ವೇ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸಭೆಗೆ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ತಿಳಿಸಿದ್ದಾರೆ ಎಂದು ಸಿಎಂಗೆ ಪತ್ರ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.‌ 

     ʼʼರಾಜ್ಯದ ಸಮಗ್ರ ಅಭಿವೃದ್ಧಿ ಜನಕಲ್ಯಾಣದ ವಿಷಯದಲ್ಲಿ ತಾವು ಬದ್ಧವಾಗಿದ್ದೇವೆ ಮತ್ತು ತಮ್ಮೊಂದಿಗೆ ಚರ್ಚಿಸಲು ಉತ್ಸುಕರಾಗಿದ್ದೇವೆ. ದಯಮಾಡಿ ಡಿಸೆಂಬರ್‌ 8ರ ಬದಲಾಗಿ ಮತ್ತೊಂದು ದಿನವನ್ನು ಗೊತ್ತುಪಡಿಸಿ. ಆದರೆ ಇದಕ್ಕೂ ಮುನ್ನ ಒಮ್ಮೆ ರಾಜ್ಯದ ಕೇಂದ್ರ ಸಚಿವರೊಂದಿಗೆ ಒಮ್ಮೆ ಸಮಾಲೋಚಿಸಿ ದಿನಾಂಕ ನಿಗದಿಪಡಿಸಿದಲ್ಲಿ ಅನುಕೂಲವಾಗುತ್ತದೆʼʼ ಎಂದು ಪ್ರಲ್ಹಾದ್‌ ಜೋಶಿ ಸಿಎಂ ಗಮನ ಸೆಳೆದಿದ್ದಾರೆ.

Recent Articles

spot_img

Related Stories

Share via
Copy link