ನಾನ್‌ಜಿಂಗ್ :
ಭಾರತದ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆಣ್ಣಮ್ ವಿಶ್ವಕಪ್ ಫೈನಲ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕಾಂಪೌಂಡ್ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶನಿವಾರ ನಡೆದ ಸ್ಫರ್ಧೆಯಲ್ಲಿ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆಗೈದರು.
ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್, ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಗ್ರೇಟ್ ಬ್ರಿಟನ್‌ನ ಎಲ್ಲಾ ಗಿಬ್ಸನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ, 15 ಪರಿಪೂರ್ಣ ಗುರಿಗಳೊಂದಿಗೆ 150-145 ಅಂಕಗಳಿಂದ ಜಯಗಳಿಸಿ, ಟೂರ್ನಮೆಂಟ್‌ನಲ್ಲಿ ತನ್ನ ಮೊದಲ ಪೋಡಿಯಂ ಫಿನಿಶ್ ಅನ್ನು ಖಚಿತಪಡಿಸಿಕೊಂಡರು. ಎಂಟು ಬಿಲ್ಲುಗಾರರ ವಿಶ್ವಕಪ್ ಋತುವಿನ ಅಂತಿಮ ಪಂದ್ಯದಲ್ಲಿ 29 ವರ್ಷದ ಭಾರತೀಯ ಆಟಗಾರ್ತಿ ಅಮೆರಿಕದ ಅಲೆಕ್ಸಿಸ್ ರುಯಿಜ್ ವಿರುದ್ಧ 143-140 ಕ್ವಾರ್ಟರ್ ಫೈನಲ್ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದ್ದರು.
ಸೆಮಿಫೈನಲ್‌ನಲ್ಲಿ, ಜ್ಯೋತಿ ವಿಶ್ವದ ನಂ. 1 ಆಟಗಾರ್ತಿ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ವಿರುದ್ಧ 143-145 ಅಂತರದಲ್ಲಿ ಸೋತರು. ಹೀಗಾಗಿ ಫೈನಲ್ ಪ್ರವೇಶದ ಅವಕಾಶ ಕಳೆದುಕೊಂಡರು. ಫೈನಲ್ ತಲುಪಿದ್ದರೆ ಕನಿಷ್ಠ ಬೆಳ್ಳಿ ಪದಕ ಜಯಿಸಬಹುದಿತ್ತು. ಆದಾಗ್ಯೂ, ಕಂಚಿನ ಪದಕದ ಪಂದ್ಯದಲ್ಲಿ ಜ್ಯೋತಿ ಉತ್ತಮ ಪ್ರದರ್ಶನ ನೀಡಿದರು.
ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಅರ್ಹತಾ ಸುತ್ತಿನ ಸ್ಪರ್ಧಿಯಾಗಿದ್ದ ಮಧುರಾ ಧಮನ್‌ಗಾಂವ್ಕರ್, ಮೆಕ್ಸಿಕೋದ ಮರಿಯಾನಾ ಬರ್ನಾಲ್ ವಿರುದ್ಧ 142-145 ಅಂತರದಲ್ಲಿ ಸೋತು ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.
