ತುಮಕೂರು:
ಡಿನ್ನರ್ ಪಾರ್ಟಿ ರದ್ದಾಗಿರುವುದಕ್ಕೆ ಸಚಿವ ರಾಜಣ್ಣ ಸಿಡಿಮಿಡಿಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಎಸ್‌ಸಿ/ಎಸ್‌ಟಿ ವಿರೋಧಿಯೇ ಎಂದು ಬುಧವಾರ ಪ್ರಶ್ನಿಸಿದ್ದಾರೆ.
ನಾಯಕತ್ವ ಸೇರಿದಂತೆ ಕೆಲವು ವಿಷಯಗಳ ಕುರಿತು ಎಸ್‌ಸಿ/ಎಸ್‌ಟಿ ಶಾಸಕರು, ಸಂಸದರು ಮತ್ತು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಾ. ಪರಮೇಶ್ವರ ಅವರು, ಬುಧವಾರ ಸಂಜೆ ಸಭೆ ನಡೆಸಲು ಬಯಸಿದ್ದರು. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಕರ್ನಾಟಕದ ಉಸ್ತುವಾರಿ) ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪರಮೇಶ್ವರ ಅವರಿಗೆ ಸಭೆ ನಡೆಸದಂತೆ ನಿರ್ದೇಶನ ನೀಡಿದ್ದು, ಇದರಿಂದಾಗಿ ಸಭೆಯನ್ನು ಅನಿವಾರ್ಯವಾಗಿ ಸಭೆಯನ್ನು ಮುಂದೂಡಬೇಕಾಯಿತು.
ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಣ್ಣ ಅವರು, ಪಕ್ಷದ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಡಿನ್ನರ್ ಪಾರ್ಟಿಯನ್ನು ಮುಂದೂಡಲಾಗಿದೆಯೇ ಹೊರತು ರದ್ದಾಗಿಲ್ಲ. ಮೊನ್ನೆ, ಸತೀಶ್ ಜಾರಕಿಹೊಳಿ ನಿವಾಸದಲ್ಲಿನ ಪಾರ್ಟಿಯ ಗೊಂದಲ ಇನ್ನೂ ಇರುವಾಗ, ಇನ್ನೊಂದು ಗೊಂದಲ ಬೇಡ ಎಂದು ಹೈಕಮಾಂಡ್ ಸೂಚಿಸಿದೆ, ಡಿ.ಕೆ.ಶಿವಕುಮಾರ್ ಅವರಿಗೆ ಬೇಸರವಾಗಲು, ಅವರ ಆಸ್ತಿಯನ್ನು ಯಾರಾದರೂ ಬರೆಸಿಕೊಂಡಿದ್ದಾರಾ? ಪರಿಶಿಷ್ಟ ಜಾತಿ ಅಥವಾ ಪಂಗಡದ ಸಮುದಾಯದವರಿಗೆ, ಪ್ರೀಯೂನಿವರ್ಸಿಟಿ ಮಕ್ಕಳಿಗೆ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಮಾಡುತ್ತಿದ್ದಾರೆ. ಅವರಿಗೆಲ್ಲಾ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ಚರ್ಚೆ ಮಾಡೋಣ ಎಂದರೆ, ಮೀಟಿಂಗ್ ಕರೆಯೋದು ಬೇಡ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಮೀಸಲಾತಿ ಅಡಿಯಲ್ಲಿ (ಕಾಲೇಜುಗಳಲ್ಲಿ) ಸೀಟು ಪಡೆದವರಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶ ನೀಡುತ್ತಿಲ್ಲ. ಈ ವಿಷಯಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಆದರೆ, ಅದಕ್ಕೆ ಅವಕಾಶ ನೀಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧವೇ? ಎಂದು ಪ್ರಶ್ನಿಸಿದರು.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಕರೆದಿದ್ದ ಸಭೆಗೆ ರಾಜಕೀಯ ಬಣ್ಣ ನೀಡಿ ಆಕ್ಷೇಪ ವ್ಯಕ್ತಪಡಿಸುವುದು ಈ ಸಮುದಾಯಗಳಿಗೆ ಅನ್ಯಾಯ ಮಾಡುವುದಲ್ಲದೆ ಬೇರೇನೂ ಅಲ್ಲ. ಇದೆಲ್ಲಾ ಜಾಸ್ತಿ ದಿನ ನಡೆಯುವುದಿಲ್ಲ. ಮುಂದಿನ ತಿಂಗಳ 14ನೇ ದಿನಾಂಕಾ ಎಂಎಂ ಹಿಲ್ಸ್‌ನಲ್ಲಿ ಸಂಪುಟ ಸಭೆ ನಡೆಯುತ್ತದೆ. ಚಾಮರಾಜನಗರ ಜಿಲ್ಲೆ ಹೋದರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅಷ್ಟರೊಳಗೆ ಸಭೆ ಮಾಡುತ್ತೇವೆ. ಇಲ್ಲ ಅಂದರೆ ಸಂಪುಟ ಬಳಿಕ ಸಭೆ ಮಾಡಿ ತಿಳಿಸುತ್ತೇವೆ ಎಂದರು
