ಲಂಡನ್:
ಆಸ್ಟ್ರೇಲಿಯಾ ವಿರುದ್ದ ಇಲ್ಲಿನ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಮೊದಲನೇ ದಿನ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಮಿಂಚಿದ್ದರು. ಅವರು ಐದು ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ತಮ್ಮದೇ ದೇಶದ ಮಾಜಿ ವೇಗಿ ಅಲಾನ್ ಡೊನಾಲ್ಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಕಗಿಸೊ ರಬಾಡ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಆಲೌಟ್ ಆಗಿತ್ತು. ರಬಾಡ ಬೌಲ್ ಮಾಡಿದ್ದ 15.4 ಓವರ್‌ಗಳಿಗೆ 51 ರನ್ ನೀಡಿ 5 ವಿಕೆಟ್ ಸಾಧನೆಯನ್ನು ಮಾಡಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಐದು ವಿಕೆಟ್ ಕಿತ್ತ ಎರಡನೇ ಬೌಲರ್ ಎಂಬ ದಾಖಲೆಯನ್ನಯು ಕೂಡ ರಬಾಡ ಬರೆದಿದ್ದಾರೆ. 2021ರಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡದ ವೇಗಿ ಕೈಲ್ ಜೇಮಿಸನ್ ಅವರು 5 ವಿಕೆಟ್ ಸಾಧನೆ ಮಾಡಿದ್ದರು. ಇದೀಗ ರಬಾಡ ಎರಡನೇ ಬೌಲರ್ ಆಗಿದ್ದಾರೆ. ಅಂದ ಹಾಗೆ ಪ್ರಥಮ ಇನಿಂಗ್ಸ್‌ನಲ್ಲಿ ಕಗಿಸೊ ರಬಾಡಗೆ ಸಾಥ್ ನೀಡಿದ್ದ ಮಾರ್ಕೊ ಯೆನ್ಸನ್ ಕೂಡ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕಗಿಸೊ ರಬಾಡ ಅವರು ದಂತಕಥೆ ಅಲಾನ್ ಡೊನಾಲ್ಡ್ ಅವರನ್ನು ಹಿಂದಿಕ್ಕಿದ್ದಾರೆ. ಡೇಲ್ ಸ್ಟೇನ್, ಶಾನ್ ಪೊಲಾಕ್ ಮತ್ತು ಮಖಾಯ ಎನ್ಟಿನಿ ಅವರ ನಂತರ ಅವರು ಈಗ ನಾಲ್ಕನೇ ಅತ್ಯಂತ ಯಶಸ್ವಿ ಹರಿಣ ಪಡೆಯ ವೇಗಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವೇಗಿಗಳು
- ಡೇಲ್ ಸ್ಟೇನ್ – 93 ಪಂದ್ಯಗಳಿಂದ 439
- ಶಾನ್ ಪೊಲಾಕ್ – 108 ಪಂದ್ಯಗಳಿಂದ 421
- ಮಖಾಯ್ ಎನ್ಟಿನಿ – 101 ಪಂದ್ಯಗಳಿಂದ 390
- ಕಗಿಸೊ ರಬಾಡ – 71 ಪಂದ್ಯಗಳಿಂದ 332*
- ಅಲಾನ್ ಡೊನಾಲ್ಡ್ – 72 ಪಂದ್ಯಗಳಿಂದ 330
ಮಾದಕ ದ್ರವ್ಯ ನಿಷೇಧದಿಂದ ಹಿಂತಿರುಗಿದ ನಂತರ ರಬಾಡ ತಮ್ಮ ಫಾರ್ಮ್ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅನುಮಾನಗಳನ್ನು ಹೋಗಲಾಡಿಸಿದ್ದಾರೆ. ಜನವರಿಯಲ್ಲಿ ಮನರಂಜನಾ ಮಾದಕ ದ್ರವ್ಯ ಬಳಕೆಯನ್ನು ಒಪ್ಪಿಕೊಂಡ ನಂತರ ರಬಾಡ, 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಒಂದು ತಿಂಗಳ ಕಾಲ ಅಮಾನತುಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆಸ್ಟ್ರೇಲಿಯಾ ತಂಡ, ಕಗಿಸೊ ರಬಾಡ ಮತ್ತು ಮಾರ್ಕೊ ಯೆನ್ಸನ್ ಅವರ ಮಾರಕ ಬೌಲಿಂಗ್ ದಾಳಿಯ ಹೊರತಾಗಿಯೂ ಸ್ಟೀವನ್ ಸ್ಮಿತ್ (66 ರನ್) ಹಾಗೂ ಬೇ ವೆಬ್‌ಸ್ಟರ್ (72 ರನ್) ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 56.4 ಓವರ್‌ಗಳಿಗೆ 212 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
