ಕಲಬುರಗಿ
ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ (35) ಎಂಬವರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ. ನಂದಿಕೂರ ಗ್ರಾಮದಲ್ಲಿ ಮಲ್ಲಿನಾಥ ಬಿರಾದಾರ್ ಎಂಬವರ ಮನೆಯಲ್ಲಿ ಜ್ಯೋತಿ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಜೆಪಿ ಕಾರ್ಯಕರ್ತನಾಗಿರುವ ನಂದಿಕೂರ್ ಗ್ರಾಮದ ಮಲ್ಲಿನಾಥ್ ಮನೆಯಲ್ಲಿ ಇಲ್ಲದ ವೇಳೆ ಜ್ಯೋತಿ ಪಾಟೀಲ್ ಬಾಗಿಲು ಬಡಿದು ಎಬ್ಬಿಸಿದ್ದಾರೆ. ಮಲ್ಲಿನಾಥ ಬಿರಾದರ್ ಪತ್ನಿ, ಮೂವರು ಮಕ್ಕಳು ಮನೆಯಲ್ಲಿ ವಾಸವಿದ್ದರು. ಬಾಗಿಲು ತೆರೆದ ತಕ್ಷಣ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡಿದ್ದಾರೆ. ಜ್ಯೋತಿ ಪಾಟೀಲ್ ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದೆ. ಘಟನೆ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಫರಹತಾಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಬಿಜೆಪಿ ಕಾರ್ಯಕರ್ತೆಯಾಗಿದ್ದ ಜ್ಯೋತಿ ಪಾಟೀಲ್ ಅವರು ಮಲ್ಲಿನಾಥ್ ಬಿರಾದಾರ್ ಅವರ ಮನೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಇಬ್ಬರ ನಡುವೆ ಯಾವುದಾದರೂ ಹಣಕಾಸಿನ ವಿಚಾರ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








