ಕೋಲ್ಕತಾ:
ಕೆಕೆಆರ್ ಮತ್ತು ಹೈದರಾಬಾದ್ ವಿರುದ್ಧ ಗುರುವಾರ ನಡೆದಿದ್ದ ಐಪಿಎಲ್ ಪಂದ್ಯ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಶ್ರೀಲಂಕಾದ ಕ್ರಿಕೆಟಿಗ, ಹೈದರಾಬಾದ್ ತಂಡದ ಕಮಿಂಡು ಮೆಂಡಿಸ್ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡಿ ಗಮನಸೆಳೆದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.
ಕೆಕೆಆರ್ ತಂಡದ ಪರ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ವೆಂಕಟೇಶ್ ಅಯ್ಯರ್ ಮತ್ತು ರಘುವಂಶಿ ಜತೆಯಾಟ ಬ್ರೇಕ್ ಮಾಡುವ ನಿಟ್ಟಿನಲ್ಲಿಇನಿಂಗ್ಸ್‌ನ 13ನೇ ಓವರ್‌ನಲ್ಲಿ ದಾಳಿಗಿಳಿದ ಕಮಿಂಡು, ಮೊದಲ ಎಸೆತದಲ್ಲಿ ಬಲಗೈ ಬ್ಯಾಟರ್ ರಘುವಂಶಿಗೆ ಎಡಗೈನಲ್ಲಿ ಸ್ಪಿನ್ ಬೌಲಿಂಗ್ ಮಾಡಿದರು. ಮುಂದಿನ ಎಸೆತದಲ್ಲಿ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್‌ಗೆ ಬಲಗೈನಲ್ಲಿ ಚೆಂಡನ್ನು ಎಸೆದರು. ಇದರಲ್ಲಿ ಅವರು ಯಶಸ್ಸು ಕೂಡ ಕಂಡರು. ರಘುವಂಶಿಯ ವಿಕೆಟ್ ಕಿತ್ತು ಜತೆಯಾಟವನ್ನು ಮುರಿದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 80 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಕೊನೆಯ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದು ನಿಂತಿದೆ. ಸೋಲು ಕಂಡ ಹೈದರಾಬಾದ್ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ಅಗ್ರಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ಸದ್ಯ 5 ತಂಡಗಳು ನಾಲ್ಕು ಅಂಕ ಹೊಂದಿದೆ.
ಗುರುವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ತಂಡ, ವೈಭವ್ ಅರೋರಾ (29 ಕ್ಕೆ 3) ಮಾರಕ ದಾಳಿ ಹಾಗೂ ವರುಣ್ ಚಕ್ರವರ್ತಿ (22 ಕ್ಕೆ 3) ಸ್ಪಿನ್ ಮೋಡಿಗೆ ನಲುಗಿ 16.4 ಓವರ್‌ಗಳಿಗೆ ಕೇವಲ 120 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು.








