ಕುಮಟ:
ಕಾಂಡ್ಲಾ ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ ಎಂದು ಕುಮಟಾ ಉಪವಿಭಾಗೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಹೇಳಿದರು.ಇಂದು ಕಿಮಾನಿ ಅಘನಾಶಿನಿ ನದಿ ತೀರದಲ್ಲಿ ಆಸ್ಟರ್ ಡಿ.ಎಮ್. ಫೌಂಡೇಶನ್‌ನ ಆಸ್ಟರ್ ವಾಲೆಂಟೀರ‍್ಸ್, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಡ್ಲಾ ವನಗಳು ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಸ್ಯ ಪ್ರಬೇಧಗಳಾಗಿರುವುದರಿಂದ ಈ ಪ್ರದೇಶದಲ್ಲಿ ವಿಶಿಷ್ಟ ರೀತಿಯ ಜೀವ ವೈವಿಧ್ಯ ಸರಪಳಿಗಳು ಸಹಜವಾಗಿಯೇ ರೂಪುಗೊಳ್ಳುತ್ತವೆ. ಅಲ್ಲದೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸುಮಾರು ಶೇ.65 ಕ್ಕಿಂತ ಹೆಚ್ಚಿನ ಪ್ರಮಾಣದ ಅನಾಹುತಗಳನ್ನು ತಡೆಯುವುದರಿಂದ ಕಾಂಡ್ಲಾ ಸಂರಕ್ಷಣೆಯ ಜವಾಬ್ದಾರಿ ಸಾರ್ವತ್ರಿಕಗೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಸ್ಟರ್ ಡಿ.ಎಮ್. ಫೌಂಡೇಶನ್‌ನ ಸಿ.ಎಸ್.ಆರ್. ಮುಖ್ಯಸ್ಥ ರೋಹನ್ ಪ್ರಾಂಕೋ ಮಾತನಾಡಿ ಭಾರತದ ಪಶ್ಚಿಮ ಸಾಗರ ತೀರ ಪ್ರದೇಶಗಳ ಸಂರಕ್ಷಣೆಯಲ್ಲಿ ಕಾಂಡ್ಲಾ ನೆಡುತೋಪುಗಳು ಪ್ರಮುಖ ಪಾತ್ರವಹಿಸುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ತೀರಗಳಲ್ಲಿ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಕಾಂಡ್ಲಾ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ, ಆಸ್ಟರ್ ಡಿ.ಎಮ್. ಫೌಂಡೇಶನ್‌ನ ಸ್ವಯಂ ಸೇವಕರು, ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.








