ಪ್ರಶಸ್ತಿ ಪ್ರದಾನ ಇಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆ

ಸಾಹಿತ್ಯ-ಸಾಂಸ್ಕøತಿಕ ವಲಯದಲ್ಲಿ ವ್ಯಾಪಕ ಅಸಮಾಧಾನ
ಸಾ.ಚಿ.ರಾಜಕುಮಾರ
ತುಮಕೂರು:


ಈ ಬಾರಿಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಹಿತಿ –ಕಲಾವಿದರ ವಲಯದಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಂಜೆಯ ಕಾರ್ಯಕ್ರಮವನ್ನು ಸಾಂಸ್ಕøತಿಕ ಕಾರ್ಯಕ್ರಮಕ್ಕಾಗಿಯೇ ಮೀಸಲಿಡಲಾಗುತ್ತಿತ್ತು. ಈ ಆಕರ್ಷಕ ಸಮಾರಂಭದಲ್ಲಿ ಗುರುತಿಸಲ್ಪಟ್ಟ ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸುತ್ತಾ ಬರಲಾಗಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಸ್ಥಗಿತಗೊಂಡಿತು. ಈ ಬಾರಿ ರಾಜ್ಯೋತ್ಸವ ಆಚರಣೆಯಾದರೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲೇ ಇಲ್ಲ. ಸಾಹಿತಿ, ಸಾಂಸ್ಕøತಿಕ ವಲಯ, ಕಲಾವಿದರನ್ನು ಸ್ಮರಿಸÀಲಿಲ್ಲ. ಇದು ಆ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇಡೀ ರಾಜ್ಯದಲ್ಲಿ ಎಲ್ಲ ಕಡೆ ರಾಜ್ಯೋತ್ಸವ ಸಮಾರಂಭ ನಡೆದಿವೆ. ಪ್ರಶಸ್ತಿ ಪ್ರದಾನ ಸಮಾರಂಭವೂ ಜರುಗಿದೆ. ರಾಜ್ಯ ಮಟ್ಟದಲ್ಲಿ ಆಕರ್ಷಕ ರೀತಿಯಲ್ಲಿ ಸಮಾರಂಭ ನೆರವೇರಿದೆ. ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯ ಮಟ್ಟದ ಈ ಸಮಾರಂಭದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ವರ್ಷದಿಂದ ಸಾಧಕರಿಗೆ ನೀಡಲಾಗುವ ಪ್ರಶಸ್ತಿ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಸುವುದಾಗಿ ಘೋಷಿಸಿದ್ದಾರೆ.

ಹೀಗೆ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಗೆ ತನ್ನದೆ ಆದ ಸ್ಥಾನವಿದೆ. ಗೌರವವೂ ಇದೆ. ನಗದು ಕಾಣಿಕೆ ನೀಡಿ ಪುರಸ್ಕರಿಸಲಾಗುತ್ತದೆ. ಆ ಗೌರವವನ್ನು ಮತ್ತಷ್ಟು ಹಿರಿದಾಗಿಸುವ ಚಿಂತನೆಗಳು ನಡೆದಿವೆ. ಜಿಲ್ಲಾ ಮಟ್ಟದಲ್ಲಿ ಇಂತಹ ನಗದು ಕಾಣಿಕೆಗಳು ಇರುವುದಿಲ್ಲ. ಆದರೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಹೀಗೆ ನಡೆದುಕೊಂಡು ಬಂದ ಪರಂಪರೆಯನ್ನೇ ಕೈಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಪ್ರಜ್ಞಾವಂತರು ಇದು ಇಡೀ ಜಿಲ್ಲೆಯ ಸಾಂಸ್ಕøತಿಕ ವಲಯಕ್ಕೆ ಮಾಡಿರುವ ಅಪಮಾನ ಎಂದಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಇದಕ್ಕಾಗಿಯೇ ಒಂದು ಆಯ್ಕೆ ಸಮಿತಿ ಇರುತ್ತದೆ. ರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ ಎನ್ನುವ ಸಂದರ್ಭದಲ್ಲಿಯಾದರೂ ಮನಸ್ಸು ಮಾಡಿದ್ದರೆ ರಾಜ್ಯೋತ್ಸವದ ದಿನದಂದು ಪ್ರಶಸ್ತಿ ಪ್ರದಾನ ಮಾಡಬಹುದಿತ್ತು. ಆ ಮೂಲಕ ಕೆಲವರನ್ನು ಗೌರವಿಸಬಹುದಿತ್ತು. ಸಾಹಿತಿ, ಕಲಾವಿದರು, ಸಾಮಾಜಿಕ ಕ್ಷೇತ್ರಗಳಲ್ಲಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾದನೆ ಗೈದಿರುವ ಹಲವು ಮಹನೀಯರು ಇದ್ದಾರೆ. ಅಂತಹವರನ್ನು ಈ ಸಮಾರಂಭಗಳಲ್ಲಿ ಗೌರವಿಸಿದರೆ ಅವರ ಸಾಮಾಜಿಕ ಸೇವೆಗೆ ಸಂದ ಮನ್ನಣೆ ಇದಾಗಿರುತ್ತದೆ. ಆದರೆ ಇಂತಹ ನಿರ್ಲಕ್ಷ್ಯ ಏಕೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಹರಿದಾಡುತ್ತಿವೆ..
ಪ್ರಶಸ್ತಿ ಪ್ರದಾನಕ್ಕೆ ಹೆಚ್ಚು ಹಣವೂ ಖರ್ಚಾಗುತ್ತಿರಲಿಲ್ಲ. ಶಾಲು, ಹಾರ ಮತ್ತು ಪ್ರಶಸ್ತಿ ನೀಡುವುದರಿಂದ ಬಹುದೊಡ್ಡ ಹೊರೆಯೂ ಆಗುತ್ತಿರಲಿಲ್ಲ. ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುವಾಗ ಇಂತಹ ಕಾರ್ಯಕ್ರಮಗಳನ್ನು ಬದಿಗೊತ್ತಿದ್ದೇಕೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಲಾವಿದರುಗಳನ್ನು ಗೌರವಿಸಲು ಇರುವ ಒಂದು ವೇದಿಕೆ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮುರಿಯುವುದು ಸರಿಯಲ್ಲ. ಸಮಾಜಕ್ಕಾಗಿ ಕೊಡುಗೆ ನೀಡುತ್ತಾ ಬಂದಿರುವ ಕಲಾವಿದರು ಹಾಗೂ ಇತರೆ ಕ್ಷೇತ್ರಗಳ ಸಾಧಕರನ್ನು ಸ್ಮರಿಸಲು ಇದೊಂದು ಸದವಕಾಶ. ಇಂತಹ ಅವಕಾಶವನ್ನೂ ಕಿತ್ತುಕೊಂಡರೆ ಸಾಮಾಜಿಕ ಕಳಕಳಿ, ಗೌರವ ಎನ್ನುವುದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
-ಡಾ.ಲಕ್ಷ್ಮಣದಾಸ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರು.

ಈ ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯಲ್ಲಿ ಚಿತ್ರಕಲೆ ಮತ್ತು ನೃತ್ಯ ಕಲೆಗಳನ್ನು ಕಡೆಗಣಿಸಿರುವುದಕ್ಕಾಗಿ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನೇ ಸಂಪೂರ್ಣವಾಗಿ ರದ್ದು ಮಾಡಿರುವುದನ್ನು ತಿಳಿದು ಆಶ್ಚರ್ಯವಾಯಿತು. ಸಚಿವರುಗಳು ತಮ್ಮ ಮನಸ್ಸಿಗೆ ಬಂದಂತೆ ಕಾರ್ಯ ಮಾಡುತ್ತಿದ್ದಾರೆ ಎಂದಾಯಿತು. ಸಾಧಕರನ್ನು ಆಯ್ಕೆ ಮಾಡುವುದಕ್ಕಿಂತ ಮುಖ್ಯವಾದ ಕೆಲಸವೇನಿರುತ್ತದೆ. ಇದು ಸಾರಸ್ವತ ಲೋಕಕ್ಕೆ ಮಾಡಿದ ಅಪಮಾನ. ನಾನು ಇದನ್ನು ಖಂಡಿಸುತ್ತೇನೆ.
-ರೇಣುಕಾ ಕೆಸರುಮಡು, ಚಿತ್ರಕಲಾವಿದರು, ತುಮಕೂರು.
ತಮ್ಮ ಜೀವಮಾನದಲ್ಲಿ ನಾಡಿಗೆ, ಸಮಾಜಕ್ಕೆ ದುಡಿದವರನ್ನು ಜಿಲ್ಲಾಡಳಿತ ಗುರುತಿಸಿ ಸನ್ಮಾನಿಸುವುದು ಒಂದು ಸಾರ್ಥಕದ ಕೆಲಸ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ಬಹಳಷ್ಟು ಜನ ಹಣ ಮಾಡಲಿಕ್ಕಾಗಿಯೇ ಇರುವುದಿಲ್ಲ. ಸಮಾಜಕ್ಕಾಗಿ ದುಡಿಯುವ ಬಹಳಷ್ಟು ಜನ ಇರುತ್ತಾರೆ. ಇಂತಹವರನ್ನು ಗುರುತಿಸಿ ಗೌರವಿಸುವುದು ಒಂದು ಉದಾರವಾದ ಮತ್ತು ನ್ಯಾಯೋಚಿತ ಕೆಲಸ. ಕಲಾವಿದರನ್ನು ಇಂತಹ ಗೌರವ ಸನ್ಮಾನಗಳಿಂದಲೇ ಅವರ ಮನಸ್ಸನ್ನು ಸಂತೋಷಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಇವರೆಲ್ಲ ಹೈರಾಣಾಗಿ ಹೋಗಿದ್ದಾರೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಸಾಧಕರನ್ನು ಸನ್ಮಾನಿಸುವ ಕೆಲಸ ಮಾಡಲಿ. ನವೆಂಬರ್ ತಿಂಗಳ ಅಂತ್ಯದವರೆಗೂ ಅವಕಾಶವಿದೆ. ಈ ಅವಕಾಶವನ್ನು ಜಿಲ್ಲಾಡಳಿತ ಉಪಯೋಗಿಸಿಕೊಳ್ಳಲಿ ಎಂಬುದು ನನ್ನ ಸಲಹೆ.
-ಡಾ.ನಟರಾಜ ಬೂದಾಳ್, ಸಾಹಿತಿ ಮತ್ತು ಸಂಶೋಧಕರು.

ಈ ಬಾರಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವ ಸುದ್ದಿಯು ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಎಂದಷ್ಟೇ ಹೇಳಬಹುದು. ಉಳಿದೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿರುವಾಗ ಇದಕ್ಕೆ ಕೋವಿಡ್ ಕಾರಣ ನೀಡುವುದಂತೂ ಸಾಧ್ಯವಿಲ್ಲ. ಜಿಲ್ಲಾ ಮಟ್ಟದ ಪ್ರಶಸ್ತಿ ಬಗ್ಗೆ ಆಯ್ಕೆ ಮಾಡಲು ಬಹುಶಃ ಸಭೆಯನ್ನೇ ನಡೆಸಲಿಲ್ಲವೆಂದು ಕಾಣಿಸುತ್ತದೆ. ಪ್ರಶಸ್ತಿಗಾಗಿ ಯಾರೂ ಕೆಲಸ ಮಾಡುವುದಿಲ್ಲ. ಆದರೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು ಇಂತಹ ಸಂದರ್ಭಗಳಲ್ಲಿ ಗುರುತಿಸಿ ಸನ್ಮಾನಿಸುವ ಮೂಲಕ ಅವರಿಗೆ ನಾವು ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಸಂಬಂಧಿಸಿದವರು , ಜನಪ್ರತಿನಿಧಿಗಳು, ಆಸಕ್ತರು ಒಂದು ಸಭೆ ಕರೆದು ನಿರ್ಣಯಿಸಿ ಈ ತಿಂಗಳಲ್ಲೇ ಒಂದು ಸರಳ ಕಾರ್ಯಕ್ರಮ ನಡೆಸಿ ಪ್ರಶಸ್ತಿ ನೀಡಬಹುದು.
-ಡಾ.ಎಸ್.ಪಿ.ಪದ್ಮಪ್ರಸಾದ್, ವಿದ್ವಾಂಸರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link