ಅಹಮದಾಬಾದ್:
ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯ ಪ್ರೀತಿಗೆ ಬಿದ್ದ ಯುವಕನೊಬ್ಬ ಆಕೆಯನ್ನು ಭೇಟಿ ಮಾಡುವ ಸಲುವಾಗಿ ಹುಚ್ಚು ಸಾಹಸ ಮಾಡಿದ್ದು, ಇದೀಗ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದೊಂದು ಎರಡು ದೇಶಗಳ ಪ್ರೇಮಿಗಳ ಕಥೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಜೀಶಾನ್ ಎಂಬಾತನಿಗೆ ಫೇಸ್ಬುಕ್ನಲ್ಲಿ ಪಾಕಿಸ್ತಾನದ ಯುವತಿಯೊಂದಿಗೆ ಪರಿಚಯವಾಗಿದೆ. ಫೇಸ್‌ಬುಕ್ ಪರಿಚಯ ಪ್ರೇಮಕ್ಕೆ ತಿರುಗಿದೆ.
ಫೋನ್‌ನಲ್ಲಿಯೇ ಇಬ್ಬರಿಗೂ ಮಾತುಕತೆಯಾಗಿದ್ದು ಯುವತಿ ತನ್ನನ್ನು ನೋಡಲು ಪಾಕಿಸ್ತಾನಕ್ಕೆ ಬರುವಂತೆ ಹೇಳಿದ್ದಾಳೆ. ತನ್ನ ಪ್ರೇಯಸಿಯನ್ನು ನೋಡಲು 20 ವರ್ಷ ಜಿಷಾನ್ ಮೊಹಮ್ಮದ್ ಸಿದ್ಧಿಕಿ ರೆಡಿ ಆಗಿ ಹೊರಟೇ ಬಿಟ್ಟಿದ್ದಾನೆ. ಹೀಗಾಗಿ ಆಕೆಯನ್ನು ಭೇಟಿ ಮಾಡಲು ಮುಂದಾದ ಈತ ಬೈಕಿನಲ್ಲಿ ಗುಜರಾತಿಗೆ ಬಂದಿದ್ದು, ಕಚ್ ಮರಳುಗಾಡಿನಲ್ಲಿ ಆತನ ಬೈಕು ಸಿಲುಕಿಕೊಂಡಿದೆ.
ಬೈಕನ್ನು ಅಲ್ಲಿಯೇ ಬಿಟ್ಟ ಆತ ಕಾಲ್ನಡಿಗೆಯಲ್ಲೇ ಪಾಕಿಸ್ತಾನದ ಗಡಿ ಪ್ರವೇಶಿಸಲು ಮುಂದಾಗಿದ್ದಾನೆ. ಆದರೆ ಅನಾಥವಾಗಿ ಬಿದ್ದಿದ್ದ ಬೈಕ್ ನೋಡಿದ್ದ ಪೊಲೀಸರು ಗಡಿಯಲ್ಲಿನ ಎಲ್ಲ ಚೆಕ್ ಪೋಸ್ಟ್ ಗಳಿಗೆ ಎಚ್ಚರಿಕೆ ರವಾನಿಸಿದ್ದು, ಈ ವೇಳೆ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ.
ಯುವಕ ತಾನು ಪ್ರೀತಿಸುವ ಹುಡುಗಿ ಪಾಕಿಸ್ತಾನ ಕರಾಚಿಯಲ್ಲಿದ್ದಾಳೆ. ಅವಳನ್ನು ಭೇಟಿಯಾಗಬೇಕು ಎಂದು ಗೂಗಲ್ ಮ್ಯಾಪ್ ಸಹಾಯದಿಂದ ಇಲ್ಲಿಯವರೆಗೆ ಬಂದಿರುವುದಾಗಿ ಯೋಧರಿಗೆ ಹೇಳಿದ್ದಾನೆ.
ಆದರೆ, ಪ್ರೀತಿ-ಪ್ರೇಮ ಏನೇ ಇದ್ದರೂ ಎರಡು ದೇಶಗಳ ನಡುವಿನ ಗಡಿಯೊಳಕ್ಕೆ ನುಸುಳಿ ಹೋಗುವುದು ಸಾಧ್ಯವಿಲ್ಲದ ಕಾರಣ, ಆತನನ್ನು ಹೀಗೆ ಕಳುಹಿಸುವುದು ಕಷ್ಟ ಎಂದು ಯೋಧರು ಹೇಳಿದ್ದಾರೆ. ಏಕೆಂದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಈ ರೀತಿ ಹೋಗುವುದು ಕಾನೂನುಬಾಹಿರ. ಇದೀಗ ಆತನ ವಿಚಾರಣೆ ನಡೆಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
