ಬೆಂಗಳೂರು:
ಕರ್ನಾಟಕದ ಜನಪ್ರಿಯ ರಾಜಕಾರಣಿ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12 ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯ ಕಾರಣದಿಂದಾಗಿ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಖಾಸಗಿ ಆಸ್ಪತ್ರೆಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಸುಮೇರ ನಿವಾಸಕ್ಕೆ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ರವಾನೆಯಾಗಿದೆ. ಸದ್ಯ ಕುಟುಂಬದವರಿಗೆ ಮಾತ್ರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಪೊಲೀಸರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ.