ಬಳ್ಳಾರಿ:
ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮೇಧಾ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ಮತದಾನ ಜಾಗೃತಿ ಜಾಥಾ ಗಮನಸೆಳೆಯಿತು.
ಜಾಥಾಗೆ ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಅವರು ಚಾಲನೆ ನೀಡಿದರು. ತಾಪಂ ಇಒ ಜಾನಕಿರಾಮ್ ಮತ್ತು ಕಾಲೇಜಿನ ಪ್ರಾಂಶುಪಾಲ ಕಿರಣ್ ಸೇರಿದಂತೆ ಸ್ವೀಪ್ ಸಿಬ್ಬಂದಿ ಹಾಗೂ ಕಾಲೇಜು ಸಿಬ್ಬಂದಿ ಇದ್ದರು. ಮೆರವಣಿಗೆಯು ಕೋಟೆ ಪ್ರದೇಶದ ಆವರಣದಲ್ಲಿರುವ ಮೇಧಾ ಕಾಲೇಜಿನ ಆವರಣದಿಂದ ಆರಂಭವಾಗಿ ಅಂಚೆ ಕಚೇರಿ ಮಾರ್ಗವಾಗಿ ಜಿಲ್ಲಾ ಪಂಚಾಯಿತಿ ವಸತಿ ಗೃಹ ಮುಖಾಂತರ ಕೋಟೆಮಲ್ಲೇಶ್ವರ ದೇವಸ್ಥಾನದವರೆಗೆ ಜಾಥ ನಡೆಯಿತು.
ಕಾಲೇಜು ತಪ್ಪಿಸಲ್ಲ ಮತದಾನ ಮರೆಯಲ್ಲ, ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಮತಚಲಾಯಿಸಿ, ಮತದಾನ ಮಾಡಿದವನೇ ಹಿರೋ, ಮನೆಯಿಂದ ಹೊರಬಂದು ಮತದಾನ ಮಾಡಿ, ಮತದಾನದಿಂದ ಪ್ರಜಾಪ್ರಭುತ್ವ ನಿರ್ಧಾರ, ಮತದಾನದಲ್ಲಿ ನೈತಿಕತೆ ಇರಲಿ, ನಿಮ್ಮ ಮತ ಸುಭದ್ರ ಸರಕಾರದ ಆಯ್ಕೆ, ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ಸೇರಿದಂತೆ ವಿವಿಧ ಮತದಾನ ಮಹತ್ವ ಸಾರುವ ಸಂದೇಶಗಳು ಈ ಜಾಥದಲ್ಲಿ ಗಮನಸೆಳೆದವು.
