ದೆಹಲಿ:
ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಪಡೆಯುವ ಉದ್ದೇಶದಿಂದ ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ನಿಯೋಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆ ನಿರಾಸೆಯುಂಟುಮಾಡಿದೆ.
ಹೌದು, ಇಂದು ಸರ್ಕಾರ ರಚನೆಗೆ ಅನುಮತಿ ಕೋರುವುದು ಸೇರಿದಂತೆ ವಿವಿಧ ವಿಚಾರಗಳ ಚರ್ಚೆಗಾಗಿ ನಿನ್ನೆಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಅಮಿತ್ ಶಾ ಭೇಟಿಗೆ ದೆಹಲಿಗೆ ತೆರಳಿತ್ತು.
ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಅಮಿತ ಶಾಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ದೆಹಲಿಯ ಅಕ್ಬರ್ ನಿವಾಸದಲ್ಲಿ ರಾಜ್ಯ ನಿಯೋಗವನ್ನು ಶಾ ಭೇಟಿ ಮಾಡಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಅವರ ವೇಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಡಿವಾಣ ಹಾಕಿದ್ದಾರೆ.
‘ಸಭಾಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್ ಎದುರು ಬಾಕಿ ಇರುವ ಕಾಂಗ್ರೆಸ್–ಜೆಡಿಎಸ್‌ನ 15 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳು ಇತ್ಯರ್ಥ ಆಗುವವರೆಗೆ ಸರ್ಕಾರ ರಚನೆಗೆ ಅವಸರ ಮಾಡಬೇಡಿ ಎಂದು ಅಮಿತ್ ಶಾ ಸ್ಪಷ್ಟ ನಿರ್ದೇಶನ ನೀಡಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅತೃಪ್ತರ ರಾಜೀನಾಮೆಯೇ ಅಂಗೀಕಾರ ಆಗಿಲ್ಲ, ಅನರ್ಹತೆ ಇತ್ಯರ್ಥ ಆಗಿಲ್ಲ. ಈಗ ಕಾಂಗ್ರೆಸ್-ಜೆಡಿಎಸ್ ಅತೃಪ್ತರ ನಂಬಿ ಸರ್ಕಾರ ಹೇಗೆ ರಚನೆ ಮಾಡ್ತೀರಿ? ಆತುರ ಬಿದ್ದು ಮತ್ತೆ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿಸಬೇಕಾ..? ‘ನಾವು ಸೂಚಿಸುವವರೆಗೂ ನೀವು ಬರುವುದು ಬೇಡ’ ಎಂಬ ಸಂದೇಶವನ್ನು ಶಾ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ