ಚೆನ್ನೈ:
ಫೇಸ್ ಬುಕ್ ಗೆಳೆಯನೊಂದಿಗೆ ಓಡಿಹೋಗುವುದನ್ನು ತಡೆದಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಸೋಮವಾರ ನಡೆದಿದೆ.
ಫೇಸ್ ಬುಕ್ ಪ್ರೇಮ:
ಕಾಲೇಜು ವಿದ್ಯಾರ್ಥಿನಿಯಾದ ದೇವಿ ಪ್ರಿಯಾಗೆ ಆರು ತಿಂಗಳ ಹಿಂದೇ ಫೇಸ್ ಬುಕ್ ನಲ್ಲಿ ವಿವೇಕ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು.
ಈ ಬಗ್ಗೆ ದೇವಿಪ್ರಿಯಾ ತನ್ನ ತಾಯಿ ಭಾನುಮತಿ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ತಾಯಿ, ಫೇಸ್ಬುಕ್ ಪ್ರೇಮವನ್ನೆಲ್ಲಾ ನಂಬೋಕೆ ಆಗಲ್ಲ. ಇದನ್ನೆಲ್ಲಾ ಬಿಟ್ಟು ನಿನ್ನ ಓದಿನ ಬಗ್ಗೆ ಗಮನಕೊಡು ಅಂತ ಬುದ್ಧಿ ಮಾತು ಹೇಳಿದ್ದಾರಂತೆ. ಸದಾ ಮೊಬೈಲಿನಲ್ಲಿದ್ದ ಮಗಳನ್ನು ಪೋಷಕರು ಗಮನಿಸಿದ್ದರು. ನಂತರ ಪೋಷಕರು ಮನೆಯಿಂದ ಹೊರ ಹೋಗದಂತೆ ಮತ್ತು ಮೊಬೈಲ್ ಬಳಸದಂತೆ ಪ್ರಿಯಾಗೆ ನಿರ್ಬಂಧ ಹಾಕಿದ್ದರು.
ಓಡಿಹೋಗಲು ಯತ್ನ :
ಈ ವಿಚಾರವನ್ನು ವಿವೇಕ್‍ಗೆ ತಿಳಿಸಿದ್ದಾಳೆ. ಆಗ ವಿವೇಕ್ ತಕ್ಷಣ ನೀನು ಮನೆಯಿಂದ ಬಾ ಇಬ್ಬರು ಓಡಿ ಹೋಗೋಣ ಎಂದು ಹೇಳಿದ್ದಾನೆ. ಅದರಂತೆಯೇ ವಿವೇಕ್ ಸೋಮವಾರ ಸಂಜೆ ಪ್ರಿಯಾಳನ್ನು ಕುಂಬಕೋಣಂಗೆ ಕರೆದುಕೊಂಡು ಬರುವಂತೆ ತನ್ನ ಸ್ನೇಹಿತರಾದ ವಿಘ್ನೇಶ್ ಮತ್ತು ಸತೀಶ್ ಇಬ್ಬರನ್ನು ಕಳುಹಿಸಿದ್ದಾನೆ.
ತಾಯಿಯ ಕೊಲೆ:
ಮನೆಯಿಂದ ಓಡಿಹೋಗಲು ಪ್ರಿಯಾ ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡು ಸಿದ್ಧಳಾಗಿದ್ದಳು. ಆಗ ಪ್ರಿಯಾ ತಾಯಿ ಭಾನುಮತಿ ಮಗಳು ಬಿಟ್ಟು ಹೋಗುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಪ್ರಿಯಾ ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಬಂದು ತಾಯಿಗೆ ಇರಿದು ಕೊಲೆ ಮಾಡಿದ್ದಾಳೆ.
ಪ್ರಿಯಾ ಕೊಲೆ ಮಾಡಿದ್ದನ್ನು ಇಬ್ಬರು ಸ್ನೇಹಿತರು ನೋಡಿ ಮನೆಯಿಂದ ಪರಾರಿಯಾಗಿದ್ದಾರೆ. ಆದರೆ ನೆರೆಹೊರೆಯವರು ಅವರ ಶರ್ಟ್ ಮೇಲೆ ಇದ್ದ ರಕ್ತದ ಕಲೆಯನ್ನು ನೋಡಿ ತಕ್ಷಣ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ದೇವಿ ಪ್ರಿಯಾ, ವಿವೇಕ್, ವಿಘ್ನೇಶ್ ಮತ್ತು ಸತೀಶ್ ಅವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ