ಗುಬ್ಬಿ: ಮುಗ್ಧ ಜೀವಗಳ ಜೊತೆ ಅಧಿಕಾರಿಗಳ ಚೆಲ್ಲಾಟ..!

 ಗುಬ್ಬಿ:

      ಈ ಬಡಾವಣೆಯಲ್ಲಿ ಒಂದು ಶಾಲೆಯಿದೆ ಆ ಶಾಲೆ ಪಕ್ಕದಲ್ಲಿಯೇ ಮಕ್ಕಳ ಜೀವ ಹಿಂಡೋ ವಾಟರ್ ಟ್ಯಾಂಕ್ ಇದೆ ಇದನ್ನು ನೋಡಿದರೆ ಸಾಕು ಏನಪ್ಪಾ ಇದು ಹಿಂಗಿದೆ ಎನಿಸುತ್ತದೆ.

      ಇದು ಯಾವಾಗ ಬೇಕಾದರೂ ವಿದ್ಯಾರ್ಥಿಗಳ ಮೈಮೇಲೆ ಬೀಳಬಹುದು ಎಂಬ ಭಯದಲ್ಲಿದ್ದಾರೆ ಪೋಷಕರು. ಮುಗ್ದ ಜೀವಗಳ ಬಲಿಗಾಗಿ ಕಾಯುತ್ತಿರುವ ಆ ವಾಟರ್ ಟ್ಯಾಂಕ್ ಇರುವುದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

      ಗುಬ್ಬಿ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಎನ್.ಹೆಚ್.206ರ ರಸ್ತೆಯ ಪಕ್ಕದಲ್ಲಿ ಸುಮಾರು 40 ವರ್ಷಗಳ ಹಿಂದೆ ಸಾರ್ವಜನಿಕರಿಗೆ ನೀರನ್ನು ಪೂರೈಸುವ ಸಲುವಾಗಿ ವಾಟರ್ ಟ್ಯಾಂಕ್‍ಅನ್ನು ನಿರ್ಮಿಲಾಗಿದೆ. ಇಂದು ಈ ವಾಟರ್ ಟ್ಯಾಂಕ್ ಯಾವ ಕ್ಷಣದಲ್ಲಿ ಬೇಕಾದರೂ ಬೀಳಬಹುದು.

      ಒಮ್ಮೆ ಸೂಕ್ಷ್ಮವಾಗಿ ನೋಡಿದರೆ ಸಾಕು ಟ್ಯಾಂಕ್ ಮಧ್ಯೆ ಅಲ್ಲಿಲ್ಲಿ ಬಿರುಕು, ಟ್ಯಾಂಕ್‍ನ 4 ಕಡೆಗಳಲ್ಲಿ ತೊಟ್ಟಿಕ್ಕುತ್ತಿರುವ ನೀರು ಇವೆಲ್ಲದರ ಮಧ್ಯೆಯೇ ಒಂದು ಶಾಲೆ ಜೊತೆಗೆ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜು. ವಾಟರ್ ಟ್ಯಾಂಕ್ ಯಾವಾಗ ಬೇಕಾದರೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಅಥವಾ ಸಾರ್ವಜನಿಕರ ಮೇಲೆ ಬೀಳಬಹುದು. ವಾಟರ್ ಟ್ಯಾಂಕ್‍ನ ಪರಿಸ್ಥಿತಿಯಿಂದ ಶಾಲೆಯಲ್ಲಿರುವ ಮಕ್ಕಳಿಗೆ ಅಪಾಯವಂತೂ ಕಟ್ಟಿಟ್ಟ ಬುತ್ತಿ.

      ಗುಬ್ಬಿ ಪಟ್ಟಣದ ಸಾರ್ವಜನಿಕರಿಂದ ನೀರನ್ನು ಪೂರೈಸುವ ಸಲುವಾಗಿ ಅರ್ಬನ್ ವಾಟರ್ ಸಪ್ಲೈನಿಂದ ಸುಮಾರು 5 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ನೀರಿನ ಸಂಗ್ರಹಾಕಾರವನ್ನು ಗಟ್ಟಿ ಚಂದ್ರಶೇಖರ್ ಅವರು ಶಾಸಕರಾದ ಸಂದರ್ಭದಲ್ಲಿ ಇಡಿ ಪಟ್ಟಣಕ್ಕೆ ನೀರನ್ನು ಒದಗಿಸುವ ಟ್ಯಾಂಕನ್ನು ಕಟ್ಟಿದ್ದು ಇಂದು ಆ ಓವರ್‍ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡು ಯಾವ ಸಂದರ್ಭದಲ್ಲಾದರೂ ಉರುಳುವ ಆತಂಕ ಇಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜ್ ವಿದ್ಯಾರ್ಥಿಗಳಲ್ಲಿ ಮೂಡಿದೆ.

      ಓವರಲ್ ಟ್ಯಾಂಕಿನ ಪಾಯಕ್ಕೆ ನೀರು ಹರಿಯುತ್ತಿದ್ದು ಇದರಿಂದ ಅಡಿಪಾಯ ಜಾಗದಲ್ಲೇ ಸುಮಾರು 5 ಅಡಿಯಷ್ಟು ಕಂದಕ ಸೃಷ್ಟಿಯಾಗಿದ್ದು ಇದರಿಂದ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂತಕ್ಕೆ ಒಳಗಾಗಿದ್ದಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿಯ ಸದಸ್ಯರಾಗಲೀ ಆಡಳಿತ ವರ್ಗದ ಅಧಿಕಾರಿಗಳಾಗಲೀ ಸ್ಥಳೀಯ ಸಚಿವರಾಗಲೀ ಗಮನ ಹರಿಸದೇ ಇರುವುದು ಒಂದೆಡೆಯಾದರೆ, ಈ ಟ್ಯಾಂಕಿನ ಪಕ್ಕದಲ್ಲೇ ಪದವಿ ಪೂರ್ವ ಕಾಲೇಜು. ಪ್ರತಿನಿತ್ಯವೂ ವಿಶ್ರಾಂತಿಗಳಿಗೆ ಈ ಜಾಗವನ್ನೇ ಅವಲಂಬಿಸಿರುವ ಸಾರ್ವಜನಿಕರು, ಟ್ಯಾಂಕ್‍ನ ಬಲಭಾಗದಲ್ಲಿ ಓದುತ್ತಿರುವ 1-10ನೇ ತರಗತಿಯ ಸುಮಾರು 1500 ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತರುವಂತೆ ಭಾಸವಾಗುತ್ತಿದೆ ಈ ವಾಟರ್ ಟ್ಯಾಂಕ್.

     ಟ್ಯಾಂಕಿನ ಮುಂಭಾಗದಲ್ಲಿ ಎನ್.ಹೆಚ್.206ನಲ್ಲಿ ನಿಮಿಷಕ್ಕೆ ನೂರಾರು ವಾಹನಗಳು ಸಂಚರಿಸುತ್ತಾ ಇದ್ದು, ಜೊತೆಗೆ ಮುಂಭಾಗದಲ್ಲೇ ಸಾರ್ವಜನಿಕ ಆಸ್ಪತ್ರೆ ಇದೆ. ಯಾವ ಸಂದರ್ಭದಲ್ಲಿ ಟ್ಯಾಂಕ್ ಯಾವ ಕಡೆ ವಾಲುತ್ತದೆ ಎಂಬುದು ದೇವರಿಗೇ ಗೊತ್ತು… ? ಮುಂದಿನ ಅನಾಹುತಕ್ಕೆ ಕಾರಣವಾಗಿರುವ ಈ ನೀರಿನ ಸಂಗ್ರಹ ತೊಟ್ಟಿಯನ್ನು ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾದರೂ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನು ಮರೆತು ನಮಗೆ ಸಂಬಂದವಿಲ್ಲದಂತೆ ನೋಡಿದರೂ ನೋಡದ ಹಾಗೆ ಇರುವುದು ಶೋಚನೀಯವಾಗಿದೆ.

      ಈ ಎಲ್ಲಾ ಸಮಸ್ಯೆಗಳು ಒಂದೆಡೆಯಾದರೆ ಸಣ್ಣ ಕೈಗಾರಿಕಾ ಸಚಿವರ ಕ್ಷೇತ್ರದಲ್ಲೇ ಪಟ್ಟಣ ಪಂಚಾಯ್ತಿಗೆ ಸರಿಯಾದ ಇಂಜಿನಿಯರ್ ಇಲ್ಲದೆ ತಾಂತ್ರಿಕ ಕಾರಣಗಳನ್ನು ತೋರಿ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಅಂದಾಜುಪಟ್ಟಿ ತಯಾರಿಸಲು ಇಂಜಿನಿಯರ್ ಇಲ್ಲದೆ ಇರುವುದು ವಿಪರ್ಯಾಸವೇ ಸರಿ.

      ವಾಟರ್ ಟ್ಯಾಂಕ್‍ನಿಂದ ಇಷ್ಟೇಲ್ಲಾ ಸಮಸ್ಯೆ ಕಂಡುಬಂದರೂ ಅಧಿಕಾರಿಗಳು ಮಾತ್ರ ಇತ್ತ ಗಮನಕೊಡದೇ ತಿರುಗಿಯೂ ನೋಡದೇ ಜಾಣ ಕುರುಡಾಗಿದ್ದಾರೆ.. ಕೈ ತುಂಬಾ ಕಾಸು ಸಿಗುತ್ತೆ ಬನ್ನಿ ಅಂದಿದ್ರೆ ನಾ ಮುಂದು ತಾ ಮುಂದು ಎಂದು ಎಲ್ಲರೂ ಬಂದ್ಬಿಡುತ್ತಿದ್ದರು ಆದ್ರೆ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಪ್ರಾಣಕ್ಕೆ ಯಾವುದೇ ಬೆಲೆ ಇಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿರುವುದು ಮಾತ್ರ ವಿಪರ್ಯಾಸ. ಇಗಲಾದರೂ ಅಧೀಕಾರಿಗಳು ಇತ್ತ ಕಡ ಕಣ್ಬಿಟ್ಟು ನೋಡಿ ಸಮಸ್ಯೆ ಬಗೆಹರಿಸಿ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗುತ್ತಾರಾ ಅನ್ನೋದನ್ನಾ ಕಾದು ನೋಡ ಬೇಕಾಗಿದೆ..

-ಸಂಜಯ್ ಕೊಪ್ಪ, ಪ್ರಗತಿ ಟಿವಿ ಗುಬ್ಬಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ