ಶ್ರೀ ಗುರು ಸಿದ್ದರಾಮ ಜಯಂತ್ಯುತ್ಸವಕ್ಕೆ ಸಕಲ ಸಿದ್ಧತೆ

ಗುಬ್ಬಿ:

   ಶ್ರೀಗುರು ಸಿದ್ದರಾಮ ಶಿವಯೋಗಿಗಳ 846ನೇ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಲಿದ್ದಾರೆ. ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಗತ್ಯವಾದ ಸಿದ್ಧತೆಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಂಡಿದ್ದು ಪ್ರಮುಖ ಸಮಾರಂಭ ನಡೆಯುವ ಅಲ್ಲಮ ಪ್ರಭು ವೇದಿಕೆ ಸಮಾರಂಭಕ್ಕೆ ಸಂಪೂರ್ಣವಾಗಿ ಸಿದ್ದಗೊಂಡಿದೆ.

  ಸಮಾರಂಭ ನಡೆಯುವ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪ್ಲೆಕ್ಸ್‍ಗಳನ್ನು ಕಟ್ಟಲಾಗಿದೆ. 40 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ವೇದಿಕೆಗಳನ್ನು ಸಿದ್ದಪಡಿಸಲಾಗಿದೆ. ಜಿಲ್ಲೆಯ ಭಕ್ತರು ಜಯಂತಿ ಮಹೋತ್ಸವಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ದವಸ ಧಾನ್ಯಗಳು ಸೇರಿದಂತೆ ತನುಮನಗಳನ್ನು ಭಕ್ತಿ ಪೂರ್ವಕವಾಗಿ ಅರ್ಪಿಸಿದ್ದಾರೆ. ಭಾಗವಹಿಸುವ ಭಕ್ತಾದಿಗಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಜ.14 ರಂದು ಬೆಳಗ್ಗೆ ಅವರೆಕಾಳು ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನ ಪಾಯಸ ಮಾಲ್ದಿಪುಡಿ, ರೈಸ್ ಬಾತ್, ಅನ್ನಸಾಂಬಾರ್, ರಸಂ, ಮೊಸರನ್ನ, ಮಜ್ಜಿಗೆ ಪ್ಯಾಕೇಟ್ ವಿತರಿಸಲಾಗುತ್ತದೆ.

  ಆ.15 ರಂದು ಬೆಳಗ್ಗೆ ಚಿತ್ರಾನ್ನ, ಅಕ್ಕಿಉಪ್ಪಿಟ್ಟು, ಪೊಂಗಲ್, ಮಧ್ಯಾಹ್ನ ಟಮೋಟೋಬಾತ್, ಅನ್ನಸಾಂಬಾರ್ ವ್ಯವಸ್ಥೆ ಮಾಡಿದ್ದು, ರಾತ್ರಿ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ವಿವಿಐಪಿ, ವಿಐಪಿ ಮತ್ತು ವಿಕಲಚೇತನರಿಗೆ ಊಟದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿದೆ. ದಾಸೋಹ ತಯಾರಿಸುವ ಸ್ಥಳಗಳಲ್ಲಿ ವಿಶೇಷವಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಸಮಾರಂಭ ನಡೆಯುವ ಮತ್ತು ದಾಸೋಹ ಸಿದ್ದಪಡಿಸುವ ಕಡೆಗಳಲ್ಲಿ ಹೆಚ್ಚಿನ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಮುನ್ನೂರಕ್ಕೂ ಹೆಚ್ಚು ಅಡುಗೆ ತಯಾರಕರು ದಾಸೋಹ ಸಿದ್ದಪಡಿಸಲು ಸಿದ್ದರಾಗಿದ್ದಾರೆ. 80 ಊಟದ ಕೌಂಟರ್ ಗಳನ್ನು ತೆರೆಯಲಾಗಿದ್ದು ಶುದ್ಧ ಕುಡಿಯುವ ನೀರಿನ ಪ್ಯಾಕೆಟ್‍ಗಳನ್ನು ವಿತರಿಸಲಾಗುತ್ತಿದೆ.

  ಮೂರು ಸಾವಿರಕ್ಕೂ ಹೆಚ್ಚು ಸ್ಥಳೀಯ ಸ್ವಯಂ ಸೇವಕರು ದಾಸೋಹ ಸೇರಿದಂತೆ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಿದ್ದರಾಗಿದ್ದಾರೆ. ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ಸಮಿತಿಯ ಕಾರ್ಯಾಧ್ಯಕ್ಷ ಶಂಕರಾನಂದ ತಿಳಿಸಿದರು.

  ಜಯಂತಿ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಶರಣರು, ಭಕ್ತರು, ಮಠದ ಹಿರಿಯ ವಿದ್ಯಾರ್ಥಿಗಳು, ಶ್ರೀಮಠದ ಉಪನ್ಯಾಸಕರು ಮತ್ತು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಮುಖ್ಯ ವೇದಿಕೆಯಲ್ಲಿ ಕವಿಗೋಷ್ಠಿ, ಯುವಗೋಷ್ಠಿಗಳು ನಡೆಯಲಿದ್ದು 30 ಕ್ಕೂ ಹೆಚ್ಚು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕೃಷಿ, ವ್ಯಾಪಾರ, ವಸ್ತು ಪ್ರದರ್ಶನ ಮಳಿಗೆಗಳು ನಿರ್ಮಾಣಗೊಂಡಿವೆ. ಈಗಾಗಲೆ 20 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು 8 ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ವೇದಿಕೆಯ ಸುತ್ತ ಮತ್ತು ಸಮಾರಂಭ ನಡೆಯುವ ಎಲ್ಲ ಕಡೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ.

  ಅನುಭವ ಮಂಟಪದ ಆವರಣ ಪ್ರವೇಶಿಸುವ 200 ಮೀಟರ್‍ವರೆಗೆ ಹೂವಿನ ಅಲಂಕಾರ ಮಾಡಲಾಗಿದೆ. ಒಟ್ಟಾರೆ ಇಡೀ ಸಮಾರಂಭ ಸುವ್ಯವಸ್ಥಿತವಾಗಿ ನಡೆಸಲು ಸಮಿತಿ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದು, ಇದೊಂದು ಮಾದರಿ ಜಯಂತ್ಯುತ್ಸವವಾಗಲಿದೆ ಎನ್ನುತ್ತಾರೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಶ್ರೀಚಂದ್ರಶೇಖರಸ್ವಾಮೀಜಿಗಳು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link