ಕನ್ನಡದ ಹಿರಿಯ ನಟ ಲೋಕನಾಥ್ ವಿಧಿವಶ

          ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

          ಅನಾರೋಗ್ಯದಿಂದ ಬಳಲುತ್ತಿದ್ದ ಲೋಕನಾಥ್ ನಿನ್ನೆ ರಾತ್ರಿ 12.15ಕ್ಕೆ ಕೊನೆಯುಸಿರೆಳೆದಿದ್ದಾರೆ. ಇವರಿಗೆ ಒಂದು ಗಂಡು ಮೂವರು ಹೆಣ್ಣು ಮಕ್ಕಳಿದ್ದಾರೆ. ಇಂದು ಮಧ್ಯಾಹ್ನ 12 ರಿಂದ 2.30 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 1929ರಲ್ಲಿ ಜನಿಸಿದ್ದ ಇವರು 1,000 ಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು, 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

           ನಾಗರಹಾವು, ಭೂತಯ್ಯನ ಮಗ ಅಯ್ಯ, ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಲೋಕನಾಥ್, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ರಂಗಭೂಮಿ, ಚಿತ್ರರಂಗವಲ್ಲದೆ ಕಿರುತೆರೆಯ ಪಾತ್ರಗಳಿಗೂ ಲೋಕನಾಥರು ಮೆರುಗು ತಂದಿದ್ದಾರೆ.

ಲೋಕನಾಥ್ ನಿಧನಕ್ಕೆ ಗಣ್ಯರ ಸಂತಾಪ:

            ಹಿರಿಯ ನಟ ಲೋಕನಾಥ್ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.ಮಾಧ್ಯಮ ಪ್ರಕಟಣೆ ಮೂಲಕ ಶೋಕ ಸಂದೇಶ ಕಳುಹಿಸಿರುವ ಅವರು, ಲೋಕನಾಥ್  ಪಾತ್ರಗಳಿಗೆ ಜೀವ ತುಂಬಿದ ನಟ. ಭೂತಯ್ಯನ ಮಗ ಅಯ್ಯ ಚಿತ್ರದಲ್ಲಿ ಅವರು ಅಭಿನಯಿಸಿದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದ್ದು, ಚಿತ್ರರಂಗ , ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.

            ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಹಾಗೂ ನಮ್ಮೆಲ್ಲರಿಗೂ ಆಪ್ತರಾಗಿದ್ದ ಲೋಕನಾಥ್ ಅವರ ನಿಧನದ ಸುದ್ದಿ ತಿಳಿದು ನನಗೆ ಅತೀವ ಬೇಸರವಾಯಿತು. ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಲೋಕನಾಥ್ ಅವರ ಕೊಡುಗೆ ಅಪಾರ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಪ್ರಾರ್ಥಿಸಿದರು.

          ಲೋಕನಾಥ್ ಕನ್ನಡ ಚಿತ್ರರಂಗ ಕಂಡ ಅದ್ಬುತ ಕಲಾವಿದರಲ್ಲಿ ಒಬ್ಬರು. 1,000 ನಾಟಕಗಳು ಹಾಗೂ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು, ‘ನಟರಂಗ’ ದ ಮೂಲಕ ರಂಗಭೂಮಿ ಪ್ರವೇಶಿಸಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಅಭಿನಯಿಸುತ್ತ ಬಂದಿದ್ದಾರೆ. ಅವರ ಅಭಿನಯ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಲೋಕನಾಥ್ ಭಾಜನರಾಗಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಅಭಿಜಾತ ಕಲಾವಿದನೊಬ್ಬನನ್ನು ಕಳೆದುಕೊಂಡಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದರು.

            ರಂಗಭೂಮಿ ಹಿನ್ನೆಲೆಯಲ್ಲಿ ಬಂದು ಚಲನಚಿತ್ರ ರಂಗದಲ್ಲಿಯೂ ಮಿಂಚಿದ ಲೋಕನಾಥ್ ತಮ್ಮ ಸಹಜ ಅಭಿನಯದಿಂದಲೇ ಪ್ರೇಕ್ಷಕರ ಮನಸಿನಲ್ಲಿ ನೆಲೆಯೂರಿದ್ದರು. ಅವರ ನಿಧನದಿಂದ ಕನ್ನಡ ಚಿತ್ರ ರಂಗ ಹಾಗೂ ರಂಗಭೂಮಿಯ ಹಿರಿಯ ಕಲಾವಿದನನ್ನು ಕಳೆದುಕೊಂಡತಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap