ವಿದ್ಯುತ್ ತಂತಿಗೆ ಬೆಂಕಿ ತಗುಲಿದ್ದರೆ ಬಾರಿ ಅನಾಹುತ …!!!

ಕುಣಿಗಲ್
   ಯಾರು ಏನೇ ಬಡ್ಕೊಂಡ್ರೂ ನಾವ್ ಮಾಡೊದೇ ಹೀಗೆ..,., ಯಾರ್ ಏನೇ ಹೇಳಿದ್ರೂ ನಾವ್ ಕೇಳೋದೇ ಹೀಗೆ .,.,. ಎಂಬುದಕ್ಕೆ ಇನ್ನೂ ಮುಗಿಯದ ಪಾರ್ಕ್ ಸುತ್ತಲಿನ ಕೊಳೆತು ನಾರುವ ಕಸದ ರಾಶಿಯ ಕಥೆಯ ಅವಾಂತರ ಸ್ವಾಮಿ.,,,.
ಉದ್ಯಾನವನದ ಸುತ್ತ ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಪ್ರಜಾಪ್ರಗತಿ ಮಾಧ್ಯಮದಲ್ಲಿ ಸುದ್ದಿ ಹಸಿಯಾಗಿರುವಾಗಲೇ ಇಲ್ಲಿನ ಪುರಸಭೆಯವರು ತರಾತುರಿಯಲ್ಲಿ ಕಸಕ್ಕೆ ಬೆಂಕಿ ಹಚ್ಚಿರುವುದರಿಂದ ಬೆಂಕಿಯ ಜ್ವಾಲೆ ಧಗಧಗಿಸಿ ಉರಿಯುತ್ತಿರುವ ದೃಶ್ಯ ಇದು.

   ಭಾನುವಾರ ರಾತ್ರಿ ಸುಮಾರು 7 ಗಂಟೆಯಲ್ಲಿ ಬೆಂಕಿ ಉರಿಯುತ್ತಿದ್ದ ದೃಶ್ಯ ಇದು. ಸಾಮಾಜಿಕ ಜಾಲತಾಣಗಳಲ್ಲಿ ಈ ಪಾರ್ಕ್ ಬಗ್ಗೆ ಹಾಗೂ ಶಾಲಾ ಕಾಲೇಜು ಮಕ್ಕಳು ಓಡಾಡುವ ಸ್ಥಳ ಹಾಗೂ ನಿತ್ಯ ಜನನಿಬೀಡ ಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ಕಸದ ರಾಶಿ ಬೀಳುತ್ತಲೇ ಇದೆ. ಈ ಬಗ್ಗೆ ಸಂಬಂಧಪಟ್ಟವರು ಸರಿಯಾದ ಕ್ರಮ ತೆಗೆದುಕೊಂಡು ಆ ಸ್ಥಳದಲ್ಲಿ ಕಸ ಹಾಕುವುದನ್ನ ನಿಷೇಧಿಸಲು ಆಗಿಲ್ಲ ಎಂಬ ಇತ್ಯಾದಿ ವಿಚಾರಗಳನ್ನ ಚರ್ಚೆ ಮಾಡುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಬೆಂಕಿ ಕಾಯಿಸುತ್ತ ಪ್ಲಾಸ್ಟಿಕ್ ಆಯುತ್ತಿದ್ದ ದೃಶ್ಯ ಸಮೇತ ಹಾಕಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಪುರಸಭೆಯವರೋ ಅಥವಾ ಕಸಹಾಕಿದವರೋ, ಇನ್ಯಾರೋ ಇದನ್ನ ಗಮನಿಸಿ ಕಸದರಾಶಿಗೆ ಬೆಂಕಿ ಹಚ್ಚಿ ಸುಡುವ ನಿರ್ಧಾರ ಮಾಡಿದ್ದಾರೆ.

   ನಾಗರೀಕರ ಕಟು ಟೀಕೆಗೆ ಗುರಿಯಾದ ಬೆಂಕಿಯ ಜ್ವಾಲೆ: ಕಸದ ರಾಶಿಗೆ ಬೆಂಕಿ ಹಚ್ಚಿ ಸುಡುವ ಸನ್ನಿವೇಶವನ್ನ ಕಂಡ ನಾಗರೀಕರು ಸಂಬಂಧಪಟ್ಟ ಪುರಸಭೆಗೆ ಹಿಡಿಶಾಪ ಹಾಕಿದ್ದಾರೆ. ಪರಿಸರ ಸಂರಕ್ಷಿಸುವ ಜವಾಬ್ದಾರಿಯನ್ನು ಒತ್ತಿರುವ ಪುರಸಭೆ ಏನು ಮಾಡುತ್ತಿದೆ. ಇಲ್ಲಿನ ಅಧಿಕಾರಿಗಳು ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದವರೆ ಬೆಂಕಿ ಹಚ್ಚಿದ್ದಾರಲ್ಲಾ ಇದೆಂತಹ ಕೆಲಸ ಎಂದು ಹಿರಿಯ ನಾಗರೀಕರು ಮತ್ತು ಆ ಭಾಗದಲ್ಲಿ ವಾಸವಿದ್ದವರು ಕಟು ಟೀಕೆ ಮಾಡಿದ್ದಾರೆ.

   ಅಲ್ಲದೆ ಅದೇ ಸ್ಥಳದಮೇಲೆ ವಿದ್ಯುತ್ ತಂತಿ ಹಾಗೂ ಪರಿವರ್ತಕ ಇದ್ದು ಏನಾದರೂ ಅನಾಹುತ ವಾಗಿದ್ದರೆ ಯಾರು ಹೊಣೆ? ವಿದ್ಯುತ್ ತಂತಿ ಲೆಕ್ಕಿಸದೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾದರೂ ಏಕೆ ? ಯಾರು ? ಎಂದು ಸಾರ್ವಜನಿಕರು ಪ್ರಶ್ನಿಸುವ ಮೂಲಕ ಇಂತಹ ಕೆಲಸ ಮಾಡಲು ಇವರೇನು ಅವಿದ್ಯಾವಂತರೇ ಸರ್ಕಾರ ಸಂಬಳ ನೀಡುವುದಿಲ್ಲವೇ? ಇಂತಹ ಕೆಲಸ ಏತಕ್ಕಾಗಿ ಮಾಡಬೇಕೆಂದೆಲ್ಲ ಛೀಮಾರಿ ಹಾಕಿದ್ದಾರೆ. ಇನ್ನೂ ಪಾರ್ಕ್ ಪಕ್ಕದಲ್ಲಿಯೆ ಇದ್ದು ಒಂದು ಪಕ್ಷ ಪಾರ್ಕ್‍ನಲ್ಲಿ ಒಣಗಿದ ತ್ಯಾಜ್ಯ ಅಥವಾ ಹುಲ್ಲು ಇದ್ದರೆ ತಕ್ಷಣವೇ ಪಾರ್ಕಿಗೂ ಬೆಂಕಿಯ ಜ್ವಾಲೆ ತಗುಲಿ ಇಡೀ ಪಾರ್ಕ್ ಸುಟ್ಟು ಹೋಗುವ ಸಾಧ್ಯತೆಯೂ ಇತ್ತು ಎಂದು ದೂರುವ ನಾಗರೀಕರು ಪತ್ರಿಕೆಯವರು ಏನ್ ಮಾಡ್ತಿರೀ,.. ಇಂತಹ ಕೆಲಸವನ್ನ ಎತ್ತಿ ಹಿಡಿಯಿರಿ ಇನ್ನಾದರೂ ಬುದ್ದಿಕಲಿಯಲಿ ಎಂದು ಅಲ್ಲೇ ಇದ್ದ ಹಿರಿಯ ನಾಗರೀಕರು ಕಟುವಾಗಿ ಪುರ ಪಿತ್ರರು- ಪುರಪುತ್ರರನ್ನ ನಿಂದಿಸಿದ ಪ್ರಸಂಗವೂ ನಡೆಯಿತು.

   ಪ್ಲಾಸ್ಟಿಕ್ ಆಯುವ ಅಮಾಯಕ ಮಕ್ಕಳು:- ಈ ಮಕ್ಕಳು ಯಾರೋ ಇಟ್ಟಿದ್ದ ಬೆಂಕಿ ಕಾಯಿಸುತ್ತಲೇ ತಮಗೆ ಬೇಕಾದ ಪ್ಲಾಸ್ಟಿಕ್ ಬಾಟಲ್   ಹುಡುಕಿಕೊಂಡು ತಮ್ಮ ಹೊಟ್ಟೆ ಪಾಡಿನ ಕೆಲಸಕ್ಕೆ ಮುಂದಾಗಿದ್ದರು. ಇಂತಹ ದೃಶ್ಯವು ಮನಕಲಕುವಂತಿತ್ತು. ಇದರಲ್ಲಿ ತರಕಾರಿ ವ್ಯಾಪಾರಿಯೊಬ್ಬ ಬೇಡದ ತರಕಾರಿಯನ್ನ ಬಿಸಾಕಿ ಹೋಗಿದ್ದರೆ ಕೆಟ್ಟ ತರಕಾರಿ ಸೊಪ್ಪಿನಲ್ಲಿ ಉತ್ತಮದನ್ನ ಆಯ್ದು ಕೊಂಡು ತನಗೆ ಬೇಕಾದ ತರಕಾರಿಯನ್ನ ಮೂಟೆ ಕಟ್ಟಿಕೊಳ್ಳುವ ಮೂಲಕ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದ ದೃಶ್ಯವೂ ಮನಕಲಕುವಂತಿತ್ತು. ಇಂತಹ ಪರಿಸ್ಥಿತಿ ಉಂಟಾಗಲು ಪುರಸಭೆಯವರ ನಿರ್ಲಕ್ಷವೇ ಮುಖ್ಯ ಕಾರಣ.

   ಕಸ ಹಾಕಲು ಬೇರೆಸ್ಥಳ ನಿಗದಿಗೊಳಿಸಲಿ :- ಇಲ್ಲಿ ಶಾಲಾ ಮತ್ತು ಕಾಲೇಜು ಮಕ್ಕಳು, ದೇವಾಲಯಗಳು ಗ್ರಂಥಾಲಯ, ಸಂತೆ ಸೇರಿದಂತೆ ಉದ್ಯಾನವದ ಸುತ್ತ ಜನ ನಿಬೀಡ ಸ್ಥಳವಾಗಿದೆ. ಈ ಸ್ಥಳ ಏನು ನಿತ್ಯ ಕಸ ಹಾಕುವ ಕಣಜವಲ್ಲ. ಇಲ್ಲಿನ ಆಜು ಬಾಜು ವ್ಯಾಪಾರಿಗಳಿಗೆ, ಮನೆಯವರಿಗೆ ನೋಟೀಸ್ ನೀಡಿ ಕಸ ಹಾಕುವುದನ್ನ ತಪ್ಪಿಸಿ ಈ ಸ್ಥಳವನ್ನ ಸ್ವಚ್ಛವಾಗಿಡುವಂತೆ ಮಾಡಲಿ, ಏಕೆಂದರೆ ಇಲ್ಲಿ ನಿತ್ಯ ಸಾವಿರಾರು ಮಕ್ಕಳು ಸೇರಿದಂತೆ ನಾಗರೀಕರು ಸಂಚರಿಸು ಸ್ಥಳವಾಗಿದೆ. ಬರೀ ಬುಧವಾರದ ಸಂತೆಯನ್ನ ದೃಷ್ಟಿಯಾಗಿಸಿಕೊಂಡು ಮಂಗಳವಾರ ಸ್ವಚ್ಛತೆ ಮಾಡಿ ಆ ಜಾಗದಲ್ಲಿ ಅಂಗಡಿಗಳಿಗೆ ಸ್ಥಳ ನೀಡಿ ಸುಂಕ ಒಂದಕ್ಕೆ ಎರಡು ಸುಂಕ ವಸೂಲಿ ಮಾಡುವ ಪರಿಪಾಠವನ್ನ ಇನ್ನಾದರೂ ಬಿಟ್ಟು ನಾಗರೀಕರ ಉತ್ತಮ ಆರೋಗ್ಯದ ದೃಷ್ಟಿಯಿಂದ ಹಾಗೂ ಶಾಲಾ ಮಕ್ಕಳ ಹಿತ ದೃಷ್ಟಿಯಿಂದ ಇಲ್ಲಿ ಕಸ ಹಾಕುವುದನ್ನ ತಪ್ಪಿಸಿ ಬೇರೊಂದು ಜಾಗದಲ್ಲಿ ಸಂತೆ ವ್ಯಾಪಾರಿಗಳಿಗೆ ಕಸ ಹಾಕಲು ಅಕಾಶ ನೀಡುವ ಚಿಂತನೆ ಮಾಡುತ್ತಾರೆಯೇ ಕಾದು ನೋಡಬೇಕಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link