ಚೆನ್ನೈ:
“ಸ್ವತಂತ್ರ ಭಾರತದ ಮೊದಲ ಉಗ್ರ ಓರ್ವ ಹಿಂದು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಮಧುರೈ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮೇ 13 ರಂದು ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, “ನಾನೊಬ್ಬ ಹೆಮ್ಮೆಯ ಭಾರತೀಯ. ಆದರೆ ನಾನೊಂದು ಮಾತು ಹೇಳುತ್ತೇನೆ. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು” ಎಂದಿದ್ದರು.
ಕಮಲ್ ಹಾಸನ್ ಅವರ ಈ ಹೇಳಿಕೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತು. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಹಾಗೂ ಕೆಲ ಹಿಂದೂಪರ ಸಂಘಟನೆ ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಪಟಿಯಾಲ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದವು. ಅಲ್ಲದೆ ಕರೂರ್ ಜಿಲ್ಲೆಯಲ್ಲಿ ಕಮಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪರಿಣಾಮ ಬಂಧನದ ಭೀತಿ ಎದುರಾಗಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ ಬಂಧನದಿಂದ ರಕ್ಷಿಸಿಕೊಳ್ಳಲು ಕಮಲ್ ಹಾಸನ್ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ಮೊರೆ ಹೋಗಿದ್ದು, ತನ್ನ ಹೇಳಿಕೆ ತೀವ್ರ ವಿವಾದ ಸ್ವರೂಪ ಪಡೆದ ಕಾರಣ ಈ ಕುರಿತು ಹೈಕೋರ್ಟ್ಗೆ ಹೇಳಿಕೆ ನೀಡಿದ ಕಮಲಹಾಸನ್, ”ನನ್ನ ಭಾಷಣ ಅಸ್ತಿತ್ವದ ಮೇಲೆ ಕೇಂದ್ರೀಕೃತವಾಗಿದೆ. ದ್ವೇಷವನ್ನು ಹುಟ್ಟುಹಾಕುತ್ತಿಲ್ಲ. ನಾಥೂರಾಮ್ ಗೋಡ್ಸೆಯ ಕುರಿತಾದ ಟೀಕೆಗಳು ಐತಿಹಾಸಿಕ ಸತ್ಯವಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದರು.
ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮಧುರೈ ಪೀಠ ನಟ ಕಮಲ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ