ದಾವಣಗೆರೆ
ಮನುಷ್ಯ ಸಂಪತ್ತಿನ ಜೊತೆಗೆ ಶಿವಜ್ಞಾನ ಸಂಪಾದಾಸಿಕೊಂಡು ಬಾಳಿದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ತಾಲೂಕಿನ ಶ್ಯಾಗಲೆ ಗ್ರಾಮದಲ್ಲಿ ಶ್ರೀಗುರು ಕರಿಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂಪತ್ತು ಗಳಿಕೆಯೊಂದೇ ಮನುಷ್ಯನ ಗುರಿ ಆಗಬಾರದು. ಆ ಸಂಪತ್ತಿನ ಜೊತೆಗೆ ಒಂದಿಷ್ಟು ಶಿವಜ್ಞಾನ ಸಂಪಾದಿಸಿಕೊಂಡು ಬಾಳಬೇಕೆಂದು ಕರೆ ನೀಡಿದರು.
ಭೌತಿಕ ಬದುಕಿಗೆ ಅಧ್ಯಾತ್ಮದ ಅರಿವು ಅತ್ಯವಶ್ಯವಾಗಿದೆ. ಧರ್ಮದಲ್ಲಿ ನಿಷ್ಠೆ, ದೇವರಲ್ಲಿ ಶ್ರದ್ಧೆ, ಗುರುವಿನಲ್ಲಿ ಭಕ್ತಿ ಇರಬೇಕೆಂದ ಶ್ರೀಗಳು, ಅಶಾಂತಿಯಿಂದ ತತ್ತರಿಸುತ್ತಿರುವ ಜೀವಾತ್ಮರಿಗೆ ಮಾನಸಿಕ ಶಾಂತಿ ನೆಮ್ಮದಿ ಬಲು ಮುಖ್ಯವಾಗಿದೆ. ಧರ್ಮದ ಅರಿವು ಇಲ್ಲದೇ ಇದ್ದರೆ ಬಾಳಿನಲ್ಲಿ ಉತ್ಕರ್ಷತೆ ಕಾಣಲು ಸಾಧ್ಯವಾಗದು ಎಂದರು.
ಅರಿವು ಆರೋಗ್ಯ ಅಧ್ಯಾತ್ಮದ ಜ್ಞಾನ ಬೋಧನೆಗೆ ಗುರುವಿನ ಅವಶ್ಯಕತೆಯಿದೆ. ಪ್ರತಿಯೊಬ್ಬ ಮನುಷ್ಯನಿಗೆ ಗುರಿ ಮತ್ತು ಗುರು ಇದ್ದರೆ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯವಾಗಲಿದೆ ಎಚಿದು ಹೇಳಿದರು.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಹಾಲಗಿ ಸದಾಶಿವ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ನೇತೃತ್ವವನ್ನು ದುಗ್ಗಾವತಿ ಮಠದ ವೇ.ವೀರಭದ್ರಸ್ವಾಮಿ ವಹಿಸಿದ್ದರು. ಸಮ್ಮುಖವನ್ನು ದುಗ್ಗಾವತಿ ಮಲ್ಲಿಕಾರ್ಜುನಸ್ವಾಮಿ ವಹಿಸಿ ಮಾರ್ಗದರ್ಶನ ನೀಡಿದರು.
ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಜರುಗಿತು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಉತ್ಸವದ ಮೂಲಕ ಬರಮಾಡಿಕೊಂಡರು.
ಇಷ್ಟಲಿಂಗ ಮಹಾಪೂಜೆ:
ಲೋಕ ಕಲ್ಯಾಣ ಜನರ ಮನ: ಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು.