ಲಕ್ನೋ:
ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಆಪರೇಷನ್ ಥಿಯೇಟರ್ ನಲ್ಲಿದ್ದ ನವಜಾತ ಮಗುವನ್ನು ಕಚ್ಚಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಖಾಸಗಿ ಫಾರೂಖಾಬಾದ್ ಆಸ್ಪತ್ರೆಯಲ್ಲಿ ನಡೆದಿದೆ.
ರವಿ ಕುಮಾರ್ ತಮ್ಮ ಗರ್ಭಿಣಿ ಪತ್ನಿ ಕಾಂಚನಾ ಅವರ ಡೆಲಿವರಿಗಾಗಿ ಅವರನ್ನು ಖಾಸಗಿ ಆಸ್ಪತ್ರೆಯ ಸಿ ಸೆಕ್ಷನ್ ಆಪರೇಷನ್ ಥಿಯೇಟರ್ ನೊಳಗೆ ಕರೆದೊಯ್ದಿದ್ದರು. ಕಾಂಚನ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಬಾಣಂತಿಯನ್ನು ಬೇರೆ ವಾರ್ಡ್ ಗೆ ಸ್ಥಳಾಂತರಿಸಿದ್ದರು. ಆದರೆ ಮಗುವನ್ನು ಆಪರೇಷನ್ ಥಿಯೇಟರ್ ನೊಳಗೆ ಇರಿಸಿದ್ದರು.
ಒಂದು ಗಂಟೆ ನಂತರ ಮಗು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರಿಗೆ ನರ್ಸ್ ತಿಳಿಸಿರುವುದಾಗಿ ಮಗುವಿನ ತಂದೆ ರವಿ ಆರೋಪಿಸಿದ್ದಾರೆ.
ಆಸ್ಪತ್ರೆಯ ಆಪರೇಷನ್ ಥಿಯೇಟರ್ ಬಳಿ ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ಹೊರಗೋಡಿಸಲು ಹರಸಾಹಸ ಪಡುತ್ತಿದ್ದರು. ಕುಟುಂಬದ ಸದಸ್ಯರು ಒಳಗೆ ಹೋದಾಗ ಮಗು ನೆಲದ ಮೇಲೆ ಬಿದ್ದಿದ್ದು, ಕುತ್ತಿಗೆಯ ಮಾಂಸವನ್ನು ನಾಯಿ ಕಚ್ಚಿ ತಿಂದಿರುವುದಾಗಿ ತಿಳಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾ.ಮೋಹಿತ್ ಗುಪ್ತಾ ಹಾಗೂ ಕೆಲವು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಆಸ್ಪತ್ರೆಗೆ ಬೀಗ ಹಾಕುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ಇನ್ನು ನವಜಾತ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಾ.ಮೋಹಿತ್ ಗುಪ್ತಾ ಹಾಗೂ ಕೆಲವು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ