ವಾಯುಪಡೆ AN-32 ವಿಮಾನ ಪತನ : ದುರಂತದಲ್ಲಿ ಯಾರೊಬ್ಬರು ಬದುಕುಳಿದಿಲ್ಲ!!

ದೆಹಲಿ:

      ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ ಯಾರೂ ಬದುಕಿ ಉಳಿದಿಲ್ಲ ಎಂದು ಭಾರತೀಯ ವಾಯುಪಡೆ ತಿಳಿಸಿದೆ. 

      13 ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತ ವಿಮಾನವು ಅರುಣಾಚಲ ಪ್ರದೇಶದ ಮೆನ್‌ಚುಕಾಗೆ ತೆರಳಲು ಅಸ್ಸಾಂನ ಜೊರ್ಹತ್‌ ವಾಯುನೆಲೆಯಿಂದ ಮಧ್ಯಾಹ್ನ 12.27ಕ್ಕೆ ಟೇಕಾಫ್‌ ಆಗಿತ್ತು. ಆದರೆ, 1 ಗಂಟೆ ಹೊತ್ತಿಗೆ ಅದು ನಿಯಂತ್ರಣ ಕಳೆದುಕೊಂಡಿತ್ತು. ತೀವ್ರ ಹುಡುಕಾಟದ ಫಲವಾಗಿ ಜೂನ್‌ 11ರ ಮಂಗಳವಾರ ವಿಮಾನ ಪತ್ತೆಯಾಗಿತ್ತು. ಆದರೆ, ರಕ್ಷಣಾ ಸಿಬ್ಬಂದಿ ದುರಂತದ ಸ್ಥಳಕ್ಕೆ ತಲುಪಿದ್ದು ಮಾತ್ರ ಗುರುವಾರ.

      ಸ್ಥಳಕ್ಕೆ ತಲುಪಿದ ರಕ್ಷಣಾ ಸಿಬ್ಬಂದಿಯ ಮಾಹಿತಿ ಮೇರೆಗೆ ಗುರುವಾರ ಟ್ವೀಟ್‌ ಮಾಡಿರುವ ವಾಯುಪಡೆ, ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಘೋಷಿಸಿದೆ.

      ದುರಂತದಲ್ಲಿ ಮಡಿದವರು:

       ಜಿ.ಎಂ ಚಾರ್ಲ್ಸ್‌, ಎಚ್‌. ವಿನೋದ್‌, ಆರ್‌. ತಾಪ, ಎ. ತನ್ವರ್‌, ಎಸ್‌. ಮೊಹಂತಿ, ಎಂ.ಕೆ ಗರಗ್‌, ಕೆ.ಕೆ ಮಿಶ್ರಾ, ಅನೂಪ್‌ ಕುಮಾರ್‌, ಶೆರಿನ್‌, ಎಸ್‌.ಕೆ ಸಿಂಗ್‌, ಪಂಕಜ್‌, ಪುಟಾಲಿ, ಮತ್ತು ರಾಜೇಶ್‌ ಕುಮಾರ್‌ ಎಂದು ಸೇನೆ ತಿಳಿಸಿದೆ.

      ದುರಂತದಲ್ಲಿ ಮಡಿದ ಸಿಬ್ಬಂದಿಯ ಕುಟುಂಬಸ್ಥರಿಗೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ ಎಂದು ಸೇನೆ ತಿಳಿಸಿದೆ. ಅಲ್ಲದೆ, ಕುಟುಂಬಸ್ಥರ ನೋವಿನಲ್ಲಿ ಭಾಗಿಯಾಗುವುದಾಗಿಯೂ ತಿಳಿಸಿದೆ.

      ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಸಿಬ್ಬಂದಿಗಳಿಗೂ ವಾಯುಸೇನೆ ಶ್ರದ್ಧಾಂಜಲಿ ಅರ್ಪಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ