ಹಾಸನ:
ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬೀಳಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಈಶ್ವರಪ್ಪವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ನಿಂಬೆಹಣ್ಣು ಸಹಿತ ರೇವಣ್ಣನನ್ನೇ ನುಂಗುತ್ತೇನೆ ಎಂದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಕೆ.ಎಸ್.ಈಶ್ವರಪ್ಪನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ. ಅವರು ಏನು ಅಂತ ಎಲ್ಲರಿಗೂ ಗೊತ್ತಿದೆ. ಅವನು ಒಂದು ರೀತಿ ಬುಡುಬುಡುಕೆ ಇದ್ದಂತೆ. ರಾಜ್ಯದಲ್ಲಿ ಯಾರೂ ಈಶ್ವರಪ್ಪನ ಹೆಸರು ಹೇಳುತ್ತಾರಾ? ಅವನಿಗೆ ಮಾನ ಮಾರ್ಯಾದೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬೀಳಲಿ. ಈ ರೀತಿಯ ಈಶ್ವರಪ್ಪನಂಥವನನ್ನು ನಾನು ಎಷ್ಟೋ ಜನ ನೋಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ? ಸಮ್ಮಿಶ್ರ ಸರ್ಕಾರ ಹಾಸನಕ್ಕೆ ಹಲವು ಯೋಜನೆ ಕೊಟ್ಟರೆ ಇದು ಹಾಸನ ಬಜೆಟ್ ಅಂತ ಹೇಳುತ್ತಾರೆ. ಈ ರೀತಿ ಮಾತನಾಡುವವರು ಯಾವ ಮುಖ ಹೊತ್ತು ಈಗ ಮತ ಕೇಳುತ್ತಾರೋ ಗೊತ್ತಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ 8 ವಿಧಾನಸಭಾ ಕ್ಷೇತ್ರಗಳ ಜನರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.