ಹೈದರಾಬಾದ್ :
ಇಲ್ಲಿನ ಎಂಸಿಆರ್ ಮಾಲ್ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ, ‘10 ರೂಪಾಯಿಗೆ ಒಂದು ಸೀರೆ!’ ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಮನೆಯಲ್ಲಿ ಅಡುಗೆ ಮಾಡುತ್ತಿದ್ದವರು, ಆಫೀಸ್ಗೆ ಹೊರಟು ನಿಂತವರು, ನೆಲ ಒರೆಸುತ್ತಿದ್ದವರು, ಗಂಡನ ಜೊತೆ ಸುಖಾಸುಮ್ಮನೆ ಜಗಳಕ್ಕೆ ನಿಂತವರು ತಮ್ಮ ಕೆಲಸವನ್ನು ಮರೆತು ಮಾಲ್ ಕಡೆ ನುಗ್ಗಿದ್ದರು. ಪರಿಣಾಮ ಮಾಲ್ ಎದುರು ದೊಡ್ಡ ಜಾತ್ರೆಯೇ ನೆರೆದಿತ್ತು! ಕಾಲ್ತುಳಿದಂಥ ಪರಿಸ್ಥಿತಿ ಕೂಡ ನಿರ್ಮಾಣವಾಯಿತು.ಮಹಿಳೆಯರಿಗೆ ಸೀರೆ ಎಂದರೆ ಪಂಚಪ್ರಾಣ. ಮನೆಯ ಕಪಾಟಿನಲ್ಲಿ ಅದೆಷ್ಟೇ ಸೀರಿಗಳಿದ್ದರೂ, ಕಡಿಮೆ ಬೆಲೆಗೆ ಉತ್ತಮ ಸೀರೆ ಕಂಡಿತೆಂದರೆ ಒಂದು ಕೈ ನೊಡಿಬಿಡೋಣ ಎನ್ನುವ ಮನಸ್ಥಿತಿಯಲ್ಲಿ ಅವರಿರುತ್ತಾರೆ. ಹೀಗಿರುವಾಗ 10 ರೂ.ಗೆ ಒಂದು ಸ್ಯಾರಿ ಕೊಡುತ್ತೇನೆ ಬನ್ನಿ ಎಂದರೆ ಅವರೆಲ್ಲಾದರೂ ಸುಮ್ಮನಿರುವುದುಂಟೇ? ಹಾಗಾಗಿ, ಎಲ್ಲರೂ ಮಾಲ್ ಕಡೆ ನುಗ್ಗಿದ್ದರು.
ಒಂದೇ ಬಾರಿ ಇಷ್ಟೊಂದು ಜನರು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಅನೇಕರು ಗಾಯಗೊಂಡಿದ್ದಾರೆ. 10 ರೂ. ಸೀರೆ ಕೊಂಡುಕೊಳ್ಳಲು ಬಂದು ಆಸ್ಪತ್ರೆ ಖರ್ಚಿಗೆ ಸಾವಿರ ರೂಪಾಯಿ ವ್ಯಯಿಸಿದೆನಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ ಕೆಲವರು.
ಈ ಅವಕಾಶವನ್ನು ಕಳ್ಳರು ಸದ್ಬಳಕೆ ಮಾಡಿಕೊಂಡಿದ್ದಾರೆ. ಸೀರೆ ಕೊಂಡುಕೊಳ್ಳುವ ನೆಪದಲ್ಲಿ ಮಾಲ್ಗೆ ನುಗ್ಗಿದ ಖದೀಮರು, ಚಿನ್ನದ ಸರ, ಪರ್ಸ್, ಮೊಬೈಲ್, ಡೆಬಿಟ್ ಕಾರ್ಡ್ಗಳನ್ನು ಕದ್ದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ