ಹೈದರಾಬಾದ್ :
ಬೆಂಗಳೂರಿನಿಂದ ಜಾರ್ಖಂಡಕ್ಕೆ ಹೊರಟಿದ್ದ ಯಶವಂತಪುರ-ಟಾಟಾನಗರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೈಲು ಯಶವಂತಪುರದಿಂದ ಜಾರ್ಖಂಡದ ಜಮ್ಶೆಡ್ಪುರಕ್ಕೆ ಹೊರಟಿತ್ತು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಸಮೀಪ ರೈಲಿನ ಕ್ಯಾಟರಿಂಗ್ ಬೋಗಿಯಲ್ಲಿ (ಅಡುಗೆ ಕೋಣೆ) ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ 2 ಗಂಟೆ ವೇಳೆಗೆ ಅಗ್ನಿಅವಘಡ ನಡೆದಿದೆ.
ಕ್ಷಣ ಮಾತ್ರದಲ್ಲಿ ಬೆಂಕಿ ಇಡೀ ಬೋಗಿ ಆವರಿಸಿತ್ತು. ರೈಲ್ವೆ ಸಿಬ್ಬಂದಿ ಬೋಗಿಯನ್ನು ಬೇರ್ಪಡಿಸುವ ಮೂಲಕ ಮುಂದಾಗಿ ದುರಂತವನ್ನು ತಪ್ಪಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ನಂತರ ರೈಲಿನಲ್ಲಿದ್ದ ಪ್ರಯಾಣಿಕರು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು.
ಈ ಅಗ್ನಿ ಅವಘಡದಿಂದ ಈ ಭಾಗದಲ್ಲಿ ರೈಲ್ವೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲ ರೈಲುಗಳು ತಡವಾಗಿ ಸಂಚರಿಸಿವೆ. ಬೆಂಕಿ ಆರಿದ ನಂತರ ರೈಲನ್ನು ಬೇರೆಡೆ ತೆಗೆದುಕೊಂಡು ಹೋಗಲಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
