ತುಮಕೂರು:
ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಛೇರಿ ತುಮಕೂರಿನಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ರವರ 128ನೇ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀಮತಿ ಸ್ಮಿತಾ.ಎಸ್ ರವರ ಪ್ರಾರ್ಥನೆಯ ಮುಖಾಂತರ ಈ ಕಾರ್ಯಕ್ರಮವು ಮೊದಲ್ಗೊಂಡಿತು. ನಂತರ ಶ್ರೀ ಗೋಪಾಲ ಹೆಗಡೆಯವರು ಈ ಸಮಾರಂಭಕ್ಕೆ ಬಂದಂತಹ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ. ಎಸ್. ಎಮ್. ಕನವಳ್ಳಿಯವರು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಡಾ||ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು . ಈ ಸಮಾರಂಭದ ಮುಖ್ಯ ಅತಿಥಿಯಾಗಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದಂತಹ ಶ್ರೀಮತಿ ಡಾ||ಟಿ ಆರ್ ಲೀಲಾವತಿಯವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದಂತಹ ಶ್ರೀಮತಿ ಡಾ|| ಟಿ.ಆರ್.ಲೀಲಾವತಿಯವರು ಅಂಬೇಡ್ಕರ್ ರವರ ವ್ಯಾಸಂಗ, ಜೀವನ, ತತ್ವ ಸಿದ್ಧಾಂತಗಳ, ಜೀವನ ಸಾಧನೆ ಮತ್ತು ಆದರ್ಶಗಳ ಬಗ್ಗೆ ಕುರಿತು ಉಪನ್ಯಾಸ ನೀಡಿದರು. ತದನಂತರ ಬ್ಯಾಂಕಿನ ಸಿಬ್ಬಂದಿ ವರ್ಗದವರು ಡಾ||ಅಂಬೇಡ್ಕರ್ ಅವರ ಕುರಿತು ಉತ್ಸಾಹದಿಂದ ಮಾತನಾಡಿದರು ಮತ್ತು ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ. ಎಸ್. ಎಮ್. ಕನವಳ್ಳಿಯವರು ಮಾತನಾಡುತ್ತಾ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ,ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಹಾಗೂ ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ಸಂವಿಧಾನ ರಚನೆಯ ರೂವಾರಿ ಅಂಬೇಡ್ಕರ್‌ಯೆಂದು ಗುಣಗಾನ ಮಾಡಿದರು.
ವಂದನಾರ್ಪಣೆಯನ್ನು ಶ್ರೀ ಗೋಪಾಲಪ್ಪನವರು ನೆರವೇರಿಸಿಕೊಟ್ಟರು ಹಾಗೂ ಈ ಕಾರ್ಯಕ್ರಮಕ್ಕೆ ತುಮಕೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.