ಅಕ್ರಮ ಗಣಿಗಾರಿಕೆ ಮಾಡಿದರೆ ಸೂಕ್ತ ಕ್ರಮ

ತುಮಕೂರು:
     ತುಮಕೂರು ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ೬೪ ಕ್ವಾರೆಗಳಿದ್ದು, ಅದನ್ನು ಹೊರತು ಪಡಿಸಿ ಪರವಾನಗಿ ಇಲ್ಲದೆಯೇ ಕ್ವಾರೆ ಕೆಲಸ ಮಾಡಿದರೆ ನಿರ್ದಾಕ್ಷ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖಾ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.

     ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಓವರ್‌ಲೋಡ್ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರ ಬಗ್ಗೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಪರವಾನಗಿ ಇಲ್ಲದೆಯೇ ಕಲ್ಲು ಗಣಿಗಾರಿಕೆ ಮಾಡುವುದರ ಬಗ್ಗೆ ಗಮನಕ್ಕೆ ಬಂದರೆ ತಕ್ಷಣವೆ ಅದನ್ನು ಬಂದ್ ಮಾಡಿಸಲು ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

     ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಖಾಲಿ ಇದ್ದ ಹುದ್ದೆಗಳಲ್ಲಿ ಒಟ್ಟು ೧೧೩ ಅಧಿಕಾರಿಗಳನ್ನು ನೇಮಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಖಾಲಿ ಇದ್ದ ೭ ಹುದ್ದೆಗಳಿಗೂ ನೇಮಕ ಮಾಡಲಾಗಿದೆ. ಅವರು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸರ್ವೇ ಮಾಡಲಿದ್ದಾರೆ. ಪರವಾನಗಿಯಲ್ಲಿ ನೀಡಲಾದ ಪ್ರದೇಶಕ್ಕೂ ಮೀರಿ ಹೆಚ್ಚಿನ ಜಾಗ ಆಕ್ರಮಿಸಿಕೊಂಡು ಗಣಿಗಾರಿಕೆ ಮಾಡುತ್ತಿರುವುದು ಗಮನಕ್ಕೆ ಬಂದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

     ಗಣಿಗಾರಿಕೆ ಮಾಡುವವರಲ್ಲಿ ಜನಪ್ರತಿನಿಧಿಗಳ ಹಿಂಬಾಲಕರು ಇದ್ದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ ಆಗಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಒಂದೇ ರೀತಿಯಲ್ಲಿ ಶಿಕ್ಷೆ ನೀಡಲಾಗುವುದು. ಈಗಾಗಲೇ ಸಾರ್ವಜನಿಕರಿಂದ ಕೆಲ ಗ್ರಾಮಗಳಲ್ಲಿ ನಡೆಸಲಾಗುತ್ತಿದ್ದ ಜಲ್ಲಿ ಕ್ರಶರ್‌ಗಳಿಂದ ತೊಂದರೆಗಳು ಆಗುತ್ತಿರುವುದರ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ, ಅದರ ಬಗ್ಗೆ ಸರ್ವೆ ಮಾಡಿ ವರದಿ ನೀಡಲು ಉಪವಿಭಾಗಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಕೆಲವರು ಲೈಸೆನ್ಸ್ ಪಡೆದವರ ಬಳಿ ಬಂಡೆಯನ್ನು ಖರೀದಿ ಮಾಡುವ ಮೂಲಕ ಗಣಿಗಾರಿಕೆ ಮಾಡುತ್ತಿರಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಒಂದು ವೇಳೆ ಪರವಾನಗಿ ಇಲ್ಲದೆಯೇ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link