ಅಜಯ್ ಮಿಶ್ರಾ ಪ್ರತಿಕೃತಿ ದಹಿಸಿ ಪ್ರತಿಭಟನೆ

ದಾವಣಗೆರೆ:

ಉತ್ತರ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸಿದ್ದಲ್ಲದೇ, ಕಾರು ಹಾಯಿಸಿ 6 ರೈತರನ್ನು ಹತ್ಯೆಗೈದ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆ ಕೊಡಿಸುವ ಜೊತೆಗೆ ಘಟನೆಯಲ್ಲಿ ಮೃತರಾದ ರೈತರ ತಲಾ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ರಾಜ್ಯ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಮಾಯಕ ರೈತರನ್ನು ಹತ್ಯೆ ಮಾಡಿದವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಎಐಕೆಎಸ್‍ನ ಜಿಲ್ಲಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ಸಚಿವ ಅಜಯ್‍ಮಿಶ್ರಾ ಹಾಗೂ ಆತನ ಪುತ್ರನ ಮೇಲೆ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕು. ರಾಜ್ಯದಿಂದ ಗಡಿಪಾರ ಮಾಡಬೇಕು. ಅಲ್ಲದೇ ಕೇಂದ್ರವು ಜಾರಿಗೆ ತರಲು ಹೊರಟಿರುವ ರೈತರಿಗೆ ಮಾರಕವಾದ ಕಾಯಿದೆಗಳನ್ನು ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕಳೆದ ಒಂದು ವರ್ಷದಿಂದ ತಮ್ಮ ಬೇಡಿಕೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಕೂಡಲೇ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ತಮ್ಮಗಳ ಹಕ್ಕುಗಳಿಗಾಗಿ ಹೋರಾಟ ಮಾಡುವವರ ಮೇಲೆ ದೌರ್ಜನ್ಯ ಪೂರಕವಾಗಿ ದಾಳಿ ಮಾಡಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ರಾಜ್ಯ, ದೇಶದ ಎಲ್ಲಾ ಸಂಘಟನೆಗಳು ಉಗ್ರ ರೂಪದ ಹೋರಾಟಕ್ಕೆ ಇಳಿಯುವ ಅಲ್ಲದೇ ಆಡಳಿತ ವ್ಯವಸ್ಥೆಯನ್ನು ಕಿತ್ತೊಗೆಯುವ ಕಾಲ ದೂರವಿಲ್ಲ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿಯ ಆವರಗೆರೆ ವಾಸು, ಎಸ್.ಎಂ.ಸಿದ್ದಲಿಂಗಪ್ಪ, ಯರಗುಂಟೆ ಸುರೇಶ್, ಹೆಚ್.ಕೆ.ಆರ್.ಸುರೇಶ್, ಕಾರ್ಯದರ್ಶಿ ಐರಣಿ ಚಂದ್ರು, ಟಿ.ಎಸ್.ನಾಗರಾಜ್, ಆರ್.ಸುರೇಶ್, ನರೇಗಾ ರಂಗನಾಥ್, ತಿಪ್ಪೇಸ್ವಾಮಿ, ಪರಶುರಾಮ ಸೇರಿದಂತೆ ಇತರರು ಇದ್ದರು.

 

Recent Articles

spot_img

Related Stories

Share via
Copy link