ಜನಸ್ಪಂದನದಲ್ಲಿ ಸೌಲಭ್ಯಕ್ಕಾಗಿ ಮನವಿಗಳ ಮಹಾಪೂರ

0
10

ದಾವಣಗೆರೆ :

         ರಸ್ತೆ, ಆಶ್ರಯ ಮನೆ, ವೃದ್ಧಾಪ್ಯ ವೇತನ, ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೋರಿ ಸಾರ್ವಜನಿಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅರ್ಜಿಸಲ್ಲಿಸಿದರು.

        ಸಫಾಯಿ ಕರ್ಮಚಾರಿಯೊಬ್ಬರು ಅರ್ಜಿಸಲ್ಲಿ, ಮ್ಯಾನುವೆಲ್ ಕರ್ಮಚಾರಿ ಸಂಘದ ವತಿಯಿಂದ, ಈ ಹಿಂದೆ 156 ಜನರಿಗೆ ಮ್ಯಾನುವೆಲ್ ಸ್ಕ್ಯಾವೆಂಜರ್ ಗುರುತಿನ ಚೀಟಿ ನೀಡಿದ ಅವಧಿಯಲ್ಲಿ ತಮಗೂ ಗುರುತಿನ ಚೀಟಿ ನೀಡಲಾಗಿದೆ. ಅಂದಿನಿಂದ ಈ ವರೆಗೂ ಯಾವುದೇ ಕೆಲಸವಿಲ್ಲದೇ, ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಲೂ ಸಹ ಆಗುತ್ತಿಲ್ಲ. ಪಾಲಿಕೆ ವತಿಯಿಂದ ತಮಗೆ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ. ಪಾಲಿಕೆಯಲ್ಲಿ ಸುಮಾರು 200 ಹುದ್ದೆ ಖಾಲಿ ಇದ್ದು, ಈ ಹುದ್ದೆಗಳಿಗೆ ತಮ್ಮನ್ನು ತುಂಬಿಕೊಳ್ಳಬೇಕು ಅಥವಾ ಪುನರ್ವಸತಿ ಕಲ್ಪಿಸಬೇಕೆಂದು ಮನವಿ ಮಾಡಿದರು.

         ಇದಕ್ಕೆ ಪ್ರತಿಕ್ರಯಿಸಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮ್ಯಾನುವೆಲ್ ಸ್ಕ್ಯಾವೆಂಜರ್ ಗುರುತಿನ ಚೀಟಿ ನೀಡಿದ ನಂತರ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕಿತ್ತು. ಈ ಅರ್ಜಿಯನ್ನು ಮಹಾನಗರಪಾಲಿಕೆಗೆ ಕಳುಹಿಸುತ್ತೇನೆ. ಅವರು ಸೂಕ್ತ ನಿರ್ದೇಶನ ನೀಡಬೇಕು ಎಂದರು.

          ಎಸ್‍ಎಸ್ ಲೇಔಟ್‍ನ ಶ್ರೀಮತಮ್ಮ ಎಂಬುವರು ಅರ್ಜಿ ಸಲ್ಲಿಸಿ, ತಮ್ಮ ನಿವೇಶನದಲ್ಲಿ ಹೊಳ ಚರಂಡಿ ಪೈಪ್‍ಲೈನ್ ಮಾರ್ಗ ಹಾದು ಹೋಗಿದೆ. ನಮ್ಮ ಸ್ವಂತ ಜಾಗದಲ್ಲಿ ಹೊಳ ಚರಂಡಿ ಪೈಪ್‍ಲೈನ್ ಬೇಡವೆಂದು ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದ್ದರೂ ಈ ಬಗ್ಗೆ ಸೂಕ್ತ ಕ್ರಮ ವಹಿಸದೇ ತೆರೆದ ಚರಂಡಿ ಮಾಡಿದ್ದಾರೆ. ದಯವಿಟ್ಟು ಇದನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು.

           ಅಪರ ಜಿಲ್ಲಾಧಿಕಾರಿಗಳು ಪಾಲಿಕೆ ಉಪ ಆಯುಕ್ತರಿಗೆ ಈ ಕುರಿತು ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.
ವಿನಾಯಕನಗರದ ಹೇಮಾವತಿ ಹಾಗೂ ಇತರರು, ತಮ್ಮ ಲೇಔಟ್‍ನಲ್ಲಿ ರಸ್ತೆ ವ್ಯವಸ್ಥೆ ಇಲ್ಲವಾಗಿ ಕನ್ಸರ್ವೆನ್ಸಿ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ರಸ್ತೆ ಇಲ್ಲದ ಕಾರಣ ಕಸ ಹಾಕುವ ವಾಹನ, ತರಕಾರಿ ಇತರೆ ಯಾವುದೇ ವಾಹನ ಬರುತ್ತಿಲ್ಲ. ಮಕ್ಕಳು, ಅಂಗವಿಕಲು ಸೇರಿಂದತೆ ನಿವಾಸಿಗಳು ಓಡಾಡುವುದೂ ಕಷ್ಟವಾಗಿದ್ದು, ಆದಷ್ಟು ಶೀಘ್ರದಲ್ಲಿ ರಸ್ತೆ ನಿರ್ಮಿಸಬೇಕು. 4 ರಿಂದ 5 ವರ್ಷಗಳಿಂದ ರಸ್ತೆಗಾಗಿ ಓಡಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

           ಕುಂದುವಾಡದ ಕೆ.ಬಿ.ಚನ್ನಬಸಪ್ಪ ದಾವಣಗೆರೆ ತಾಲ್ಲೂಕಿನ ಎನ್‍ಹೆಚ್-4 ಕ್ಕೆ ಹೋಗಿರುವ ಜಮೀನನ್ನು ವಜಾಗೊಳಿಸಿ, ರಿ ಸರ್ವೇ ಮಾಡಿಸಿ ಪಹಣಿ ನೀಡಲು 10 ತಿಂಗಳ ಹಿಂದೆಯೇ ಅರ್ಜಿ ನೀಡಿದ್ದರೂ ಈ ಕೆಲಸವಾಗಿಲ್ಲ. ಆದಷ್ಟು ಬೇಗ ಸರ್ವೇ ಮಾಡಿಸಿ ಪಹಣಿ ಕೊಡಿಸುವಂತೆ ಕೋರಿದರು. ಅಪರ ಜಿಲ್ಲಾಧಿಕಾರಿಗಳು, ದಾವಣಗೆರೆ ತಹಶೀಲ್ದಾರರಿಗೆ ಪರಿಶೀಲಿಸಲು ಸೂಚಿಸಿದರು.

           ತೋಳಹುಣಸೆಯ ಶ್ರೀ ಆಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು, ದೇವಸ್ಥಾನ ನಿರ್ಮಾಣಕ್ಕೆ ಮರಳು ಪಡೆಯಲು ಅನುಮತಿ ನೀಡುವಂತೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಪರ್ಕಿಸಿ ಅನುಮತಿ ಪಡೆಯಬೇಕು. ಅರ್ಜಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಳುಹಿಸಲು ಸೂಚಿಸಿದರು.

           ಐಟಿಐ ಮಾಡಿದ ಯುವಕನೋರ್ವ ತಾವು ನಿರುದ್ಯೋಗಿಯಾಗಿದ್ದು, ಉದ್ಯೋಗ ಅಥವಾ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡುವಂತೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳು, ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳಲು ತಿಳಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವಂತೆ ತಿಳಿಸಿದರು.

         ಸಿದ್ದನಮಠ ಗ್ರಾಮದ ಖಾಸಗಿ ಪ್ರೌಢಶಾಲೆಯನ್ನು ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಸಲಾಗುತ್ತಿದೆ ಎಂದು ದೂರಿ ಅರ್ಜಿ ಸಾರ್ವಜನಿಕರೊಬ್ಬರು ಅರ್ಜಿ ಸಲ್ಲಿಸಲಿದರು. ಅಪರ ಜಿಲ್ಲಾಧಿಕಾರಿಗಳು ಈ ಕುರಿತು ಡಿಡಿಪಿಐ ವತಿಯಿಂದ ಪರಿಶೀಲಿಸಿ, ವಿಚಾರಣೆ ನಡೆಸುತ್ತೇನೆ ಎಂದರು.

           ಮಾನಸಿಕ ಸಮಸ್ಯೆ ಮತ್ತು ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ತಮಗೆ ಸರ್ಕಾರದಿಂದ ಏನಾದರೂ ಸೌಲಭ್ಯಗಳಿದ್ದರೆ ಅಥವಾ ಸ್ವಯಂ ಉದ್ಯೋಗಕ್ಕೆ ಧನ ಸಹಾಯ ನೀಡುವಂತೆ ಮನವಿ ಮಾಡಿದರು.

           ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಶಶಿಧರ್ ಪ್ರತಿಕ್ರಿಯಿಸಿ ಬುದ್ದಿಮಾಂಧ್ಯರಿಗೆ ಸ್ವಯಂ ಉದ್ಯೋಗಕ್ಕೆ ನೀಡುವ ಸೌಲಭ್ಯಗಳನ್ನು ಪೋಷಕರು ಸದ್ಬಳಕೆ ಮಾಡಿಕೊಳ್ಳಬಹುದು. ಹಾಗೂ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅವಕಾಶವಿದೆ ಎಂದರು.

             ಕಟ್ಟಡ ಕಾರ್ಮಿಕರೋರ್ವರು ಕಟ್ಟಡ ಕಟ್ಟುವಲ್ಲಿ ನಿರತಾಗಿದ್ದಾಗ ಕೈ ಮುರಿದುಕೊಂಡು ಚಿಕಿತ್ಸೆಗಾಗಿ ಬಹುತೇಕ ಹಣ ಖರ್ಚು ಮಾಡಿದ್ದು, ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

            ಕಾರ್ಮಿಕ ಇಲಾಖೆಯಡಿ ಕಟ್ಟಡ ಕಾರ್ಮಿಕರ ಸಂಘಟನೆಯಲ್ಲಿ ನೋಂದಣಿಯಾಗದ ಕಾರಣ ಇವರಿಗೆ ಪರಿಹಾರ ಒದಗಿಸಲು ಬರುವುದಿಲ್ಲವೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದರು. ಅಪರ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋರಿ ಅರ್ಜಿ ಕಳುಹಿಸಲಾಗುವುದು ಎಂದರು.

             ಆಶ್ರಯ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಅಪರ ಜಿಲ್ಲಾಧಿಕಾರಿಗಳು ಇಲ್ಲಿ ಅರ್ಜಿ ನೀಡಿದರೂ ಈ ಅರ್ಜಿಗಳನ್ನು ಮಹಾನಗರಪಾಲಿಕೆಗೇ ಕಳುಹಿಸಲಾಗುವುದು ಆದ್ದರಿಂದ ಮಹಾನಗರಪಾಲಿಕೆಯಲ್ಲಿಯೇ ಅರ್ಜಿ ಸಲ್ಲಿಸಲು ತಿಳಿಸಿದರು. ಸಭೆಗೆ ಹಾಜರಾಗದ ಅಧಿಕಾರಿಗಳಿ ನೋಟಿಸ್ ನೀಡಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಡಿಹೆಚ್‍ಓ ಡಾ. ತ್ರಿಪುಲಾಂಭ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಉಮೇಶ್, ಉದ್ಯೋಗಾಧಿಕಾರಿ ರುದ್ರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ವಿಕಲಚೇತನಾಧಿಕಾರಿ ಶಶಿಧರ್, ಮಹಾನಗರಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here