ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ವಿರುದ್ಧ ನಾಲ್ಕು ಬಾರಿ ನಿರ್ಣಯಗಳಾಗಿದ್ದವು. ಪ್ರತೀ ಬಾರಿಯೂ ಚೀನಾ ಕಲ್ಲು ಹಾಕುತ್ತಿತ್ತು. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 30ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ ಘಟನೆ ನಡೆದ ಬಳಿಕ ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ಮಸೂದ್ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮತ್ತೊಮ್ಮೆ ಮುಂದಿಟ್ಟಿದ್ದವು. ಆಗಲೂ ಕೂಡ ಚೀನಾ ದೇಶ ತಾಂತ್ರಿಕ ಕಾರಣವೊಡ್ಡಿಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಿಲ್ಲ.
ಇತ್ತೀಚಿನ ದಿನಗಳಲ್ಲಿ ಚೀನಾದ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿತು. ಫ್ರಾನ್ಸ್ ಮತ್ತು ಅಮೆರಿಕ ದೇಶಗಳೂ ಚೀನಾ ಮೇಲೆ ಒತ್ತಡ ಹಾಕಿದವು. ಹೀಗಾಗಿ, ಚೀನಾ ತನ್ನ ನಿರ್ಧಾರವನ್ನು ಬದಲಿಸಿತು. ಚೀನಾವು ಬೆಂಬಲ ಹಿಂಪಡೆದ ಕಾರಣ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಸಾದ್ಯವಾಯಿತು.
ವಿಶ್ವ ಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಭದ್ರತಾ ಮಂಡಳಿ(ಯುಎನ್ಎಸ್ಸಿ)ಯೂ ಒಂದು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಪಾಲನೆಯ ಜವಾಬ್ದಾರಿ ಇದಕ್ಕಿದೆ. ವಿಶ್ವ ಸಂಸ್ಥೆಗೆ ಹೊಸ ಸದಸ್ಯ ರಾಷ್ಟ್ರಗಳನ್ನು ಸೇರಿಸಲು ಅಥವಾ ಅದರ ನಿಯಮಾವಳಿಯಲ್ಲಿ ಏನಾದರೂ ಬದಲಾವಣೆ ಮಾಡಲು ಈ ಮಂಡಳಿಯ ಅನುಮೋದನೆ ಅಗತ್ಯ. ಜಾಗತಿಕ ಶಾಂತಿ ಕಾರ್ಯಾಚರಣೆ, ಅಂತಾರಾಷ್ಟ್ರೀಯ ನಿಷೇಧಗಳು ಇತ್ಯಾದಿ ಕ್ರಮಗಳನ್ನ ಕೈಗೊಳ್ಳುವ ಅಧಿಕಾರ ಭದ್ರತಾ ಮಂಡಳಿಗಿದೆ. ಈ ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳಿರುತ್ತವೆ. ಅವುಗಳ ಪೈಕಿ ರಷ್ಯಾ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಈ ಐದು ರಾಷ್ಟ್ರಗಳು ಖಾಯಂ ಸದಸ್ಯತ್ವ ಹೊಂದಿವೆ. ಉಳಿದ 10 ಸದಸ್ಯರನ್ನು ಪ್ರಾದೇಶಿಕತೆ ಆಧಾರದ ಮೇಲೆ ಆವರ್ತನೆ ಮಾಡಲಾಗುತ್ತದೆ.