ದೆಹಲಿ :

ಕಾಶ್ಮೀರ ವಿಚಾರದಲ್ಲಿ ಭಾರತ ವಿರುದ್ಧ ಪಾಕಿಸ್ಥಾನ ಕುದಿಯುತ್ತಿರುವಂತೆಯೇ, ಪಾಕ್ 2 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯಂತ್ರಣ ರೇಖೆ ಸನಿಹಕ್ಕೆ ಕಳುಹಿಸಿದೆ.
ಪಾಕ್ ನೆಲದಲ್ಲಿ ಠಿಕಾಣಿ ಹೂಡಿರುವ ಕುಖ್ಯಾತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ತಮ್ಮ ತರಬೇತಿ ಶಿಬಿರಕ್ಕೆ ಭಾರೀ ಪ್ರಮಾಣದಲ್ಲಿ ಸ್ಥಳೀಯರು ಹಾಗೂ ಅಫ್ಘಾನಿಸ್ತಾನ ಪ್ರಜೆಗಳನ್ನು ನೇಮಿಸಿಕೊಳ್ಳುತ್ತಿವೆ. ಈ ಆಘಾತಕಾರಿ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನ ಸೇನೆ ಕೂಡಾ ಗಡಿ ನಿಯಂತ್ರಣ ರೇಖೆ ಬಳಿ ದೊಡ್ಡ ಮಟ್ಟದಲ್ಲಿ ಸೈನಿಕರ ಜಮಾವಣೆ ಆರಂಭಿಸಿದೆ.

ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀ. ದೂರದಲ್ಲಿ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸದ್ಯದ ಮಟ್ಟಿಗೆ ಅವರನ್ನು ರಕ್ಷಣಾತ್ಮಕವಾಗಿ ನಿಯೋಜಿಸಿರುವಂತಿದೆ. ಹಾಗಿದ್ದರೂ ಕೂಡಾ ನಾವು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ, ಪಾಕ್ ಸೇನೆಯ ಚಲನವಲನಗಳ ಮೇಲೆ ನಿಗಾವಹಿಸಿದ್ದೇವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಬಳಿಕ ಪಾಕಿಸ್ತಾನ, ಒಂದೆಡೆ ಭಾರತದ ಗಡಿಯೊಳಗೆ ಉಗ್ರರನ್ನು ನುಗ್ಗಿಸುತ್ತಿದೆ, ಮತ್ತೊಂದೆಡೆ ತನ್ನ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








