ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿ ಅನರ್ಹ ಶಾಸಕರುಗಳಿಗೆ ರಿಲೀಫ್ ನೀಡಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ 17 ಜನರ ಭವಿಷ್ಯ ನಿರ್ಧರಿಸಲಿರುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು(ಬುಧವಾರ) ಪ್ರಕಟಿಸಿದ್ದು, ಸ್ಪೀಕರ್ ನಡೆ ಸರಿಯಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎನ್.ವಿ.ರಮಣ, ಅನರ್ಹತೆಯನ್ನು ನಾವು ಒಪ್ಪಿದ್ದೇವೆ. ಆದರೆ ಅನರ್ಹಗೊಳಿಸಿದ್ದರೂ ಚುನಾವಣೆಗೆ ನಿರ್ಬಂಧ ಹೇರಿದ್ದು ತಪ್ಪು. ಅನರ್ಹತೆ ಕಾಲಾವಧಿಯನ್ನು ಸ್ಪೀಕರ್ ನಿಗದಿಪಡಿಸಿದ್ದು ಸರಿಯಲ್ಲವೆಂದು ಹೇಳಿರುವ ನ್ಯಾಯಮೂರ್ತಿಗಳು, ಉಪ ಚುನಾವಣೆಯಲ್ಲಿ ಇವರುಗಳು ಸ್ಪರ್ಧಿಸಬಹುದೆಂದು ಹೇಳಿದೆ. ಆದರೆ, ಅನರ್ಹ ಶಾಸಕರು ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆಯಾಗುವವರೆಗೂ ಮಂತ್ರಿ ಆಗುವಂತಿಲ್ಲ ಎಂದೂ ತಿಳಿಸಿದೆ.

ನ್ಯಾಯಮೂರ್ತಿ ಎನ್.ವಿ. ರಮಣ ಅವರಿದ್ದ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು, ನ್ಯಾಯಮೂರ್ತಿಗಳಾದ ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಇದಾಗಿತ್ತು.
ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದ ತೀರ್ಪು, ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದೇ, ಇಲ್ಲವೇ ಎಂಬುದನ್ನು ನಿರ್ಧರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







