‘ಸಲಾರ್’ ಚಿತ್ರ ಮುಹೂರ್ತ ; ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ!!

 ಹೈದರಾಬಾದ್:‌

      ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ.

      ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ʼಕೆಜಿಎಫ್‌ʼ ಚಿತ್ರದಂಥ ಬಿಗ್‌ ಬಜೆಟ್‌ ಇಂಡಿಯನ್‌ ಸಿನಿಮಾವನ್ನು ನಿರ್ಮಾಣ ಮಾಡಿದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ನಿರ್ಮಿಸುತ್ತಿರುವ ಹಾಗೂ ಅದೇ ʼಕೆಜಿಎಫ್‌ʼ ಚಿತ್ರವನ್ನು ನಿರ್ದೇಶಿಸಿ ಮೊದಲ ಟೀಸರ್‌ನಿಂದಲೇ ಜಗತ್ತಿನ ಎಲ್ಲ ದಾಖಲೆಗಳನ್ನು ಬ್ರೇಕ್‌ ಮಾಡಿರುವ ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಲಾರ್‌ʼ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು. 

      ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿ ನೀಡಿರುವ ʼಸಲಾರ್‌ʼ ಚಿತ್ರತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ಹೀರೋ ಪ್ರಭಾಸ್‌, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು. ʼಸಲಾರ್‌ʼ ಚಿತ್ರದ ಮುಹೂರ್ತದ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ.

ಶುಭ ಹಾರೈಸಿದ ಡಿಸಿಎಂ: salaar-1

     ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿಎ.ಎನ್.ಅಶ್ವತ್ಥನಾರಾಯಣ “ಕನ್ನಡದಲ್ಲಿ ತಮ್ಮ ಹೊಂಬಾಳೆ ಫಿಲ್ಮ್ಸ್‌ ವತಿಯಿಂಧ ʼಕೆಜಿಎಫ್ ಚಾಪ್ಟರ್‌-1ʼ, ʼಕೆಜಿಎಫ್‌ ಚಾಪ್ಟರ್-‌2ʼ ಅದಕ್ಕೂ ಹಿಂದೆ ಇನ್ನು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಜಯ್‌ ಕಿರಗಂದೂರು ʼಸಲಾರ್‌ʼ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಕೆಜಿಎಫ್‌ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಪ್ರಶಾಂತ್‌ ನೀಲ್‌ ಅವರು ʼಸಲಾರ್‌ʼ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್‌ ಅವರ ಈ ಚಿತ್ರ ಮಾಡುತ್ತಿರುವುದು ತುಂಬಾ ಸಂತೋಷ ಉಂಟು ಮಾಡಿದೆ. ಈ ಮೂಲಕ ಭಾಷೆ, ಗಡಿಗಳನ್ನು ಮೀರಿ ಕನ್ನಡ-ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ʼಬಾಹುಬಲಿʼ ಚಿತ್ರದಿಂದ ಕನ್ನಡದ ಅಭಿಮಾನಿಗಳ ಮನಗೆದ್ದಿರುವ ಪ್ರಭಾಸ್‌ ಅವರು ʼಸಲಾರ್‌ʼ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ ಎಂದರು.

ಪ್ರಭಾಸ್‌ ಜೊತೆ ಚಿತ್ರ ಖುಷಿ ಸಂಗತಿ ಎಂದ ವಿಜಯ್:‌

     “ನಾನು ʼಬಾಹುಬಲಿʼ ಚಿತ್ರವನ್ನು ನೋಡಿ ಪ್ರಭಾಸ್‌ ಅವರಿಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಮೂಲಕ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ʼಸಲಾರ್‌ʼ ಚಿತ್ರವನ್ನು ತಯಾರು ಮಾಡುತ್ತಿದ್ದೇವೆ. ನಮ್ಮ ʼಕೆಜಿಎಫ್‌ʼ ಚಿತ್ರವನ್ನು ಡೈರೈಕ್ಟ್‌ ಮಾಡಿರುವ ಪ್ರಶಾಂತ್‌ ನೀಲ್‌ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದರು ನಿರ್ಮಾಪಕ ವಿಜಯ್‌ ಕಿರಗಂದೂರು.

ಮುಹೂರ್ತದಲ್ಲಿ ಪ್ರಭಾಸ್‌ ಭಾಗಿ

     ʼಸಲಾರ್‌ʼ ಚಿತ್ರಕ್ಕೆ ಪ್ರಭಾಸ್‌ ಅವರ ಹೊರತಾಗಿ ನಾಯಕ ನಟಿ, ಇನ್ನಿತರೆ ತಾರಾಬಳಗ ಆಯ್ಕೆಯಾಗಿಲ್ಲ. ಚಿತ್ರವನ್ನು ಅನೌನ್ಸ್‌ ಮಾಡಿದಾಗ ಹೊರಬಿದ್ದ ಸಲಾರ್‌ ಫಸ್ಟ್‌ಲುಕ್‌ ದೇಶದೆಲ್ಲೆಡೆ ವೈರಲ್‌ ಆಗಿತ್ತು. ಪ್ರಭಾಸ್‌ ಈಗಾಗಲೇ ʼರಾಧೆ ಶ್ಯಾಂʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆ ಹಂತದಲ್ಲಿದೆ. ʼಆದಿಪುರುಷ್‌ʼ ಚಿತ್ರದ ಶೂಟಿಂಗ್‌ ಇನ್ನೇನು ಆರಂಭವಾಗಬೇಕಿದೆ. ಇದರ ಜತೆಯಲ್ಲೇ ಈಗ ʼಸಲಾರ್‌ʼ ಚಿತ್ರವೂ ಟೇಕಾಫ್‌ ಆಗಿದೆ. ನಟ ಯಶ್, ರವಿ ಬಸ್ರೂರ್​, ಭುವನ್​ ಗೌಡ ಸೇರಿದಂತೆ ಕೆಜಿಎಫ್‌ ಚಿತ್ರತಂಡದ ಅನೇಕರು ಪಾಲ್ಗೊಂಡಿದ್ದರು. ಅದರಲ್ಲೂ ಯಶ್‌ ಪ್ರಮುಖ ಆಕರ್ಷಣೆಯಾಗಿದ್ದರು.

     ʼಈಶ್ವರ್‌ʼ ಚಿತ್ರದಿಂದ ಮೊದಲುಗೊಂಡು ʼಸಾಹೋʼ ತನಕ ಪ್ರಭಾಸ್‌‌ ನಟಿಸಿದ ಒಟ್ಟು 19 ಚಿತ್ರಗಳು ರಿಲೀಸ್‌ ಆಗಿವೆ. ಈ ಪೈಕಿ ʼಬಾಹುಬಲಿ-ದಿ ಬಿಗಿನಿಂಗ್‌ʼ ಹಾಗೂ ʼಬಾಹುಬಲಿ-ಕನ್‌ಕ್ಲೂಶನ್‌ʼ ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡಿದ್ದವು. ಇದೀಗ ಅವರು ನಟಿಸುತ್ತಿರುವ ʼಸಲಾರ್‌ʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಕ್ರೇಜ್‌ ಸೃಷ್ಟಿ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link