ನವದೆಹಲಿ:
ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿ ರದ್ದತಿ ಬಳಿಕ ಸಿಪಿಐ (ಎಂ) ಪಕ್ಷದ ನಾಯಕ ಸೀತಾರಾಂ ಯೆಚೂರಿ ಅವರ ಕಾಶ್ಮೀರ ಭೇಟಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ತಮ್ಮ ಪಕ್ಷದ ಸಹದ್ಯೋಗಿ ಹಾಗೂ ಮಾಜಿ ಶಾಸಕ ಮೊಹಮ್ಮದ್ ಯೂಸಪ್ ತಾರಿಗಾಮಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಭೇಟಿಗಾಗಿ ತಮಗೆ ಕಾಶ್ಮೀರಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಸೀತಾರಾಂ ಯೆಚೂರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಆರ್ಟಿಕಲ್ 370 ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ತನ್ನ ಪಾಲಕರ ಭೇಟಿಗೆ ಅವಕಾಶ ನೀಡುವಂತೆ ಕಾಶ್ಮೀರ ವಿದ್ಯಾರ್ಥಿ ಮೊಹಮದ್ ಅಲೀಮ್ ಸೈಯ್ಯದ್ ಸಲ್ಲಿಸಿದ್ದ ಮನವಿಗೆ ಒಪ್ಪಿಗೆ ಸೂಚಿಸಿದ್ದು, ಅನುಮತಿ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ ಅತನ ಪ್ರಯಾಣ ಮತ್ತು ಸುರಕ್ಷತೆಗೆ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಈ ಭೇಟಿಯನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ಬಳಸದಿರುವಂತೆ ಸೀತಾರಾಂ ಯೆಚೂರಿ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನೀವು ಅಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಿದರೆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲು ಮುಕ್ತರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ ಸೀತಾರಾಮ್ ಯೆಚೂರಿ ಅವರಿಗೆ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಯೂಸುಫ್ ತಾರಿಗಾಮಿ ಅವರನ್ನು ಭೇಟಿ ಮಾಡಲು ಅನುಮತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
