ತುಮಕೂರು:
ಸಿದ್ದಗಂಗೆಯನ್ನು ಜಗತ್ತಿನ ಭೂಪಟದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದವರು ಸಿದ್ದಗಂಗಾ ಶ್ರೀಗಳು ಎಂದು ಸುತ್ತೂರು ಸಂಸ್ಥಾನದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅವರು ಇಂದು ಲಿಂ. ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112 ನೇ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ. ಆದರೆ ೧೧೨ ಶ್ರೀಗಳು ಇಂದಿನ ಜಯಂತಿಯಿಂದ ಉದಯಿಸಿದ್ದಾರೆ. 112 ನವಜಾತ ಶಿಶುವಿನಲ್ಲಿ ನೆಲೆಸಿದ್ದಾರೆ ಎಂದರು.
ಶ್ರೀಗಳು ಯಾರೇ ಬಂದರೂ ಎಲ್ಲಿಂದ ಬಂದಿದ್ದೀರಾ? ಮಳೆ, ಬೆಳೆ ಹೇಗಿದೆ..? ಎಂದು ಕೇಳುತ್ತಿದ್ದರು. ಆ ನಂತರ ಪ್ರಸಾದ ಸ್ವೀಕರಿಸಿ ಎನ್ನುತ್ತಿದ್ದರು. ಆಮೇಲೆ ಮುಂದಿನ ಚರ್ಚೆ ಹೋಗುತ್ತಿದ್ದರು. ಸಮುದ್ರ ಹೇಗಿತ್ತು ಎಂದರೆ ಉದಾಹರಣೆ ನೀಡಲು ಸಾಧ್ಯವಿಲ್ಲ. ಅದರಂತೆ ಶ್ರೀಗಳು ಹೇಗೆ ಬದುಕ್ಕಿದ್ದರು ಎಂದರೆ ಅವರಾಗಿಯೇ ಬದುಕಿದ್ದರು. ಅವರಿಗೆ ಮತ್ತೊಂದು ಉದಾಹರಣೆ ನೀಡಲು ಅಸಾಧ್ಯ. ಅಂತಹ ವ್ಯಕ್ತಿತ್ವ ಅವರದು ಎಂದು ಶ್ರೀಗಳನ್ನು ಸ್ಮರಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ಕಲಾ ಕ್ಷೇತ್ರದಲ್ಲಿ ರಾಜಕುಮಾರ್, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳು. ರಾಜ್ಯದಲ್ಲಿ ಮೂರು ವ್ಯಕ್ತಿಗಳ ಸಾಧನೆ ಅಸಾದ್ಯ. ಶ್ರೀಗಳ ದಿನನಿತ್ಯದ ಕೆಲಸ ಊಹಿಸಲೂ ಅಸಾಧ್ಯ. ಮುಂಜಾನೆ 3 ಗಂಟೆಗೆ ಎದ್ದು ಧನುರ್ಮಾಸದ ಸಂದರ್ಭದಲ್ಲಿ ಶಿವಪೂಜೆ ಮಾಡುತ್ತಿದ್ದರು. ಆ ರೀತಿಯ ಕಠಿಣವಾದ ಜೀವನ ಶೈಲಿ ಅವರದು. ಕಾಯಕ್ಕೆ ಖಾಯಿಲೆ ಬಾರದ ಜೊತೆಯಲ್ಲಿ, ಭವಕ್ಕೆ ಭಾದೆ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು.
ಶ್ರೀಗಳ ಮಾತೃ ವಾತ್ಸಲ್ಯ ವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಮಕ್ಕಳ ಬಗ್ಗೆ ಅತೀವ ಅನುಕಂಪ ಹೊಂದಿದ್ದರು. ಇಡೀ ಪೂಜಾ ಫಲವನ್ನು ಸಮಾಜಕ್ಕೆ ದಾನ ಮಾಡಿದ್ದಾರೆ. ಸಾತ್ವಿಕ ಸಂತರಾಗಿ, ನಾಡು ಮೆಚ್ಚಿದ ಶ್ರೇಷ್ಠ ಶರಣರಾಗಿದ್ದಾರೆ ಶ್ರೀಗಳನ್ನು ಅವಿಸ್ಮರಣೀಯವಾಗಿ ಸದಾ ನೆನಪು ಮಾಡಿಕೊಳ್ಳಬೇಕು. ಅವರು ಇರುವ ಅವಧಿಯಲ್ಲಿ ಶಾಶ್ವತ ಹೆಸರು ಉಳಿಯುವಂತೆ ಕೆಲಸ ನಿರ್ವಹಿಸಿದ್ದರು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
