ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ;ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ!!

ನವದೆಹಲಿ :

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ರಸ್ತೆ ಮಧ್ಯೆಯೇ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ದೇಶದ ಹಲವೆಡೆ ರೈತರ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಪ್ರತಿಭಟನೆ ನಡೆಯುತ್ತಿದ್ದು, ಇಂದು ಬೆಳಗ್ಗೆ 7.40ರ ಸುಮಾರಿಗೆ 15ರಿಂದ 20 ಜನರ ಗುಂಪೊಂದು ಮಾನ್​ಸಿಂಗ್ ರಸ್ತೆಗೆ ಟ್ರ್ಯಾಕ್ಟರ್​ ತೆಗೆದುಕೊಂಡು ಬಂದರು. ನೋಡನೋಡುತ್ತಿದ್ದಂತೆ ಆ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಇಂದು ಬೆಳಗ್ಗೆ ಇಂಡಿಯಾ ಗೇಟ್ ಸುತ್ತ ಹೊಗೆ ಆವರಿಸಿತ್ತು. ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

     ಘಟನೆ ನಡೆದ ಕೂಡಲೆ 2 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ಆರಿಸಿವೆ. ಇಂಡಿಯಾ ಗೇಟ್ ಬಳಿಯಲ್ಲೇ ಈ ಘಟನೆ ನಡದಿದ್ದರಿಂದ ಭದ್ರತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

     ಅಲ್ಲಿಗೆ ಟ್ರ್ಯಾಕ್ಟರ್​ನಲ್ಲಿ ಬಂದ ಗುಂಪಿನವರು ಕೈಯಲ್ಲಿ ಭಗತ್ ಸಿಂಗ್ ಫೋಟೋ ಇರುವ ಪೋಸ್ಟರ್​ಗಳನ್ನು ಹಿಡಿದುಕೊಂಡು ಬಂದಿದ್ದರು ಎಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಕಂಡುಹಿಡಿಯಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಪೊಲೀಸರ ಹೇಳಿಕೆ ಪ್ರಕಾರ, ಪ್ರತಿಭಟನಾಕಾರರು ಕಾಂಗ್ರೆಸ್ ಪರ ಘೋಷಣೆ ಕೂಗುತ್ತಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ